ಯಲ್ಲಾಪುರ: ತಾಲೂಕಿನ ಆನಗೋಡ ಶಿಸ್ತಮುಡಿ ಗಣಪತಿ ಕಟ್ಟೆಯ ದೇವಸ್ಥಾನದಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲೀ ಶ್ರೀಗಳ ಆದೇಶದಂತೆ ನದಿ ತಿರುವು ಯೋಜನೆಯ ವಿರುದ್ಧ ಭಜನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಗ್ರಾಮಗಳಲ್ಲಿ ಭಜನಾ ಕಾರ್ಯಕ್ರಮಗಳನ್ನು ನಡೆಸುವಂತೆ ನೀಡಿದ ಸೂಚನೆಯಂತೆ, ಯುಗಾದಿ ಪಾಡ್ಯದ ದಿನದಿಂದ ನವಮಿಯವರೆಗೆ ಪ್ರತಿದಿನ ಭಜನೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಊರಿನ ಮಾತೆಯರು ಹಾಗೂ ಮಹನೀಯರು ಸಕ್ರಿಯವಾಗಿ ಭಾಗವಹಿಸಿ ಭಕ್ತಿಭಾವದಿಂದ ಭಜನಾ ಸೇವೆ ಸಲ್ಲಿಸಿದರು.
ಕಾರ್ಯಕ್ರಮದ ಕೊನೆಯ ದಿನ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನದಿ ತಿರುವು ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪೂರೋಹಿತರಾದ ಗೋಪಾಲಕೃಷ್ಣ ಭಟ್ ಕೊರಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಗಳ ಆದೇಶದಂತೆ ಎಲ್ಲರೂ ಒಂದಾಗಿ ನಡೆದುಕೊಳ್ಳಬೇಕೆಂದು ಕರೆ ನೀಡಿದರು. ಜಾನ್ಹವಿ ಗಣಪತಿ ಭಟ್ ಎಲ್ಲರ ಸಹಕಾರ ಮುಂದೆಯೂ ಹೀಗೆಯೇ ಇರಲಿ ಎಂದು ಮನವಿ ಮಾಡಿಕೊಂಡರು.
ಕಾರ್ಯಕ್ರಮದ ಅಂಗವಾಗಿ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಯನ್ನು ಕೈಬಿಡುವಂತೆ ಶ್ರೀದೇವರಲ್ಲಿ ಪ್ರಾರ್ಥಿಸಲಾಯಿತು. ಕೆ.ಟಿ. ಹೆಗಡೆ ಸ್ವಾಗತಿಸಿ ವಂದಿಸಿದರು. ಭಕ್ತಿ, ಏಕತೆ ಮತ್ತು ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಈ ಕಾರ್ಯಕ್ರಮ ಮಾದರಿಯಾಗಿತ್ತು.