ಮೈಸೂರು :ಪಿರಿಯಾಪಟ್ಟಣ ಪುರಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಸಭೆಯಲ್ಲಿ ₹26.26 ಲಕ್ಷಗಳ ಉಳಿತಾಯ ಬಜೆಟ್ ಅನ್ನು ಆಡಳಿತಾಧಿಕಾರಿ ಕೆ.ವಿ. ಕಾವ್ಯರಾಣಿ ಮಂಡಿಸಿದರು. ಸಭೆಗೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಈ ಬಜೆಟ್ ಸಮಗ್ರ ಹಾಗೂ ಸಮತೋಲನ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿದ್ದು, ಆರ್ಥಿಕ ಶಿಸ್ತು ಕಾಪಾಡುವ ದೃಷ್ಟಿಯಿಂದ ರೂಪಿಸಲಾಗಿದೆ ಎಂದು ತಿಳಿಸಿದರು.
ಒಟ್ಟಾರೆ ₹2436.57 ಲಕ್ಷ ಆದಾಯವನ್ನು ನಿರೀಕ್ಷಿಸಲಾಗಿದ್ದು, ₹2410.31 ಲಕ್ಷ ವೆಚ್ಚವನ್ನು ನಿರ್ಧರಿಸಲಾಗಿದೆ. ಇದರಿಂದ ₹26.26 ಲಕ್ಷಗಳ ಉಳಿತಾಯ ಸಾಧಿಸುವ ಉದ್ದೇಶ ಹೊಂದಲಾಗಿದೆ.
ಆದಾಯ ಮೂಲಗಳು:
ಪುರಸಭೆಯ ವಿವಿಧ ಮೂಲಗಳಿಂದ ಆದಾಯ ನಿರೀಕ್ಷಿಸಲಾಗಿದ್ದು, ಆಸ್ತಿ ತೆರಿಗೆ ₹250 ಲಕ್ಷ, ನೀರಿನ ಕರ ₹72 ಲಕ್ಷ, ವಾಣಿಜ್ಯ ಮಳಿಗೆಗಳ ಬಾಡಿಗೆ ₹34.24 ಲಕ್ಷ, ಕುರಿ-ಕೋಳಿ-ಮೀನು ಅಂಗಡಿಗಳ ಶುಲ್ಕ ₹33 ಲಕ್ಷ, ಹೊಸ ಬಡಾವಣೆಗಳ ಅಭಿವೃದ್ಧಿ ಶುಲ್ಕ ₹25 ಲಕ್ಷ, ಉದ್ಯಮ ಪರವಾನಗಿ ₹14 ಲಕ್ಷ ಹಾಗೂ ಇತರೆ ಮೂಲಗಳಿಂದ ₹60 ಲಕ್ಷ ಆದಾಯ ನಿರೀಕ್ಷಿಸಲಾಗಿದೆ.
ಅನುದಾನಗಳ ನಿರೀಕ್ಷೆ:
ಸರ್ಕಾರದ ವಿವಿಧ ಯೋಜನೆಗಳಡಿ ಮಹತ್ವದ ಅನುದಾನಗಳನ್ನು ನಿರೀಕ್ಷಿಸಲಾಗಿದೆ. ಎಸ್.ಎಫ್.ಸಿ. ಯೋಜನೆಯಡಿ ವೇತನಕ್ಕೆ ₹250 ಲಕ್ಷ, ವಿದ್ಯುತ್‌ಗೆ ₹219 ಲಕ್ಷ, ಬಂಡವಾಳ ಸೃಜನೆಗೆ ₹5 ಲಕ್ಷ, ಕುಡಿಯುವ ನೀರಿಗೆ ₹5 ಲಕ್ಷ, ಎಸ್.ಸಿ.ಎಸ್.ಪಿ. ಯೋಜನೆಗೆ ₹1 ಲಕ್ಷ, ಸ್ವಚ್ಛ ಭಾರತ್ 2.0 ಅಡಿಯಲ್ಲಿ ಕಸದ ನಿರ್ವಹಣಾ ಯಂತ್ರೋಪಕರಣಗಳಿಗೆ ₹50 ಲಕ್ಷ, ಅಮೃತ್ 2.0 ಯೋಜನೆಯಡಿ ಕೆರೆ ಹಾಗೂ ಉದ್ಯಾನಗಳ ಅಭಿವೃದ್ಧಿಗೆ ₹350 ಲಕ್ಷ ಮೀಸಲಿರಲಿದೆ. 16ನೇ ಹಣಕಾಸು ಆಯೋಗದಿಂದ ₹214 ಲಕ್ಷ ಹಾಗೂ ಇತರೆ ಇಲಾಖೆ-ನಿಗಮಗಳಿಂದ ₹500 ಲಕ್ಷ ಅನುದಾನ ನಿರೀಕ್ಷಿಸಲಾಗಿದೆ.
ಮುಖ್ಯ ವೆಚ್ಚ ಮೀಸಲುಗಳು:
ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ₹200 ಲಕ್ಷ, ಬೆಟ್ಟದಪುರ ರಸ್ತೆಯ ರಾಜ ಕಾಲುವೆ ಅಭಿವೃದ್ಧಿಗೆ ₹100 ಲಕ್ಷ, ಉದ್ಯಾನ ಅಭಿವೃದ್ಧಿಗೆ ₹50 ಲಕ್ಷ, ಕಸದ ನಿರ್ವಹಣಾ ಯಂತ್ರೋಪಕರಣ ಖರೀದಿಗೆ ₹50 ಲಕ್ಷ, ಅಮೃತ್ 2.0 ಯೋಜನೆಯಡಿ ಕೆರೆಗಳ ಅಭಿವೃದ್ಧಿಗೆ ₹300 ಲಕ್ಷ ಮೀಸಲಿರಿಸಲಾಗಿದೆ.
ನೌಕರರ ವೇತನಕ್ಕೆ ₹380 ಲಕ್ಷ, ಹೊರಗುತ್ತಿಗೆ ನೌಕರರಿಗೆ ₹100 ಲಕ್ಷ, ಪಟ್ಟಣದ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ₹45 ಲಕ್ಷ, ನೀರು ಸರಬರಾಜಿಗೆ ₹50 ಲಕ್ಷ, ಬೀದಿ ದೀಪಗಳಿಗೆ ₹219 ಲಕ್ಷ, ದುರಸ್ಥಿ ನಿರ್ವಹಣೆಗೆ ₹35 ಲಕ್ಷ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅನುದಾನ ಮೀಸಲಾಗಿದೆ.
ಪತ್ರಕರ್ತರಿಗೆ ಸಹಾಯಧನ :
ಪತ್ರಕರ್ತರ ಆರೋಗ್ಯದ ಹಿತದೃಷ್ಟಿಯಿಂದ ಮಾರಣಾಂತಿಕ ಕಾಯಿಲೆಗಳಿಗೆ ಒಳಗಾಗುವವರಿಗೆ ವೈದ್ಯಕೀಯ ವೆಚ್ಚಕ್ಕೆ ₹2 ಲಕ್ಷ ಸಹಾಯಧನ ಮೀಸಲಿರಿಸಲಾಗಿದೆ.
ಪುರಸಭೆ ಮುಖ್ಯಾಧಿಕಾರಿ ಎಚ್.ಪಿ. ಮಧು ಮಾತನಾಡಿ, ಈ ಬಜೆಟ್ ಸಾಮಾಜಿಕ ನ್ಯಾಯ, ಸಾರ್ವಜನಿಕ ಹಿತ ಹಾಗೂ ಮೂಲಭೂತ ಸೌಕರ್ಯಗಳ ಬಲವರ್ಧನೆಗೆ ಒತ್ತು ನೀಡುವ ಮೂಲಕ ಸ್ವಚ್ಛತೆ ಮತ್ತು ಕಲ್ಯಾಣವನ್ನು ಉತ್ತೇಜಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಆಡಳಿತಾಧಿಕಾರಿ ಕಾವ್ಯರಾಣಿ, ಪೌರಕಾರ್ಮಿಕರ ನೇಮಕಾತಿ, ಸ್ವಚ್ಛತಾ ಯಂತ್ರೋಪಕರಣಗಳ ಖರೀದಿ ಹಾಗೂ ಸಾರ್ವಜನಿಕ ಸ್ಮಶಾನ ನಿರ್ಮಾಣದ ಕುರಿತು ಸಕಾರಾತ್ಮಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಸಭೆಯ ಅಂತ್ಯದಲ್ಲಿ ಆಡಳಿತಾಧಿಕಾರಿ ಕೆ.ವಿ. ಕಾವ್ಯರಾಣಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಕೌಂಟೇಟ್ ಪ್ರದೀಪ್, ಪುರಸಭೆ ಆರ್‌ಓ ಗಿರೀಶ್, ಆರ್‌ಐ ರಾಮಕೃಷ್ಣ, ಸಮುದಾಯ ಸಂಘಟಕರಾದ ಶರ್ಮಿಳಾ, ಪುರಸಭೆ ಇಂಜಿನಿಯರ್ ವೈಶಾಲಿ, ಇಂಜಿನಿಯರ್ ವನಿತಾ, ಆರೋಗ್ಯ ನಿರೀಕ್ಷಕರಾದ ಮೋಹನ್, ಪ್ರದೀಪ್, ಕರವಸೂಲಿಗಾರರಾದ ಚಂದನ್, ಹರೀಶ್,ವಜನಾಕ್ಷಿ, ನಿಶ್ಚಿತಾ, ಗೀತಾ, ಸ್ವರ್ಣ, ಮಂಜುನಾಥ್, ರಾಜು, ಸ್ವಾಮಿ, ನಾರಾಯಣ್, ಚಿನ್ನೇಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.