ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ, ಸೇವನೆ, ಸರಬರಾಜು ವಿರುದ್ಧ ತೀವ್ರ ಸಮರ ಸಾರಿರುವ ಉತ್ತರಕನ್ನಡ ಜಿಲ್ಲಾಡಳಿತವು ಜಿಲ್ಲೆಯನ್ನು ಮಾದಕ ವಸ್ತು ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟನ ಕ್ರಮಗಳನ್ನು ಕೈಗೊಂಡಿದೆ.
ಜಿಲ್ಲೆಯಾದ್ಯಂತ ವ್ಯಾಪಕ ತಪಾಸಣೆಗಳನ್ನು ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತಂತೆ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಜಿಲ್ಲೆಯಲ್ಲಿ 2023ರಿಂದ ಇದುವರೆಗೆ ಮಾದಕ ವಸ್ತು ಸಾಗಾಟಕ್ಕೆ ಸಂಬಂಧಿಸಿದಂತೆ 106 ಪ್ರಕರಣಗಳಲ್ಲಿ 169 ಆರೋಪಿತರನ್ನು ಬಂಧಿಸಿದ್ದು, 75.534 ಕೆ.ಜಿ ಗಾಂಜಾ, 3.429 ಕೆ.ಜಿ. ಚರಸ್, 1.8 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದೆ.
ಇವುಗಳ ಒಟ್ಟು ಮೌಲ್ಯ ರೂ. 48,89,400 ಆಗಿದ್ದು, ಮಾದಕ ವಸ್ತು ಸೇವನೆಯ 456 ಪ್ರಕರಣಗಳಲ್ಲಿ 577 ಜನರನ್ನು ಬಂಧಿಸಲಾಗಿದೆ. ಇದರಲ್ಲಿಯೂ 2025ರ ಜನವರಿಯಿಂದ 2026ರ ಫೆಬ್ರವರಿವರೆಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆರೋಪಿತರನ್ನು ಬಂಧಿಸುವ ಮೂಲಕ, ಮಾದಕ ವಸ್ತು ಸೇವನೆ ಮತ್ತು ಸರಬರಾಜುದಾರರಿಗೆ ಕಠಿಣ ಸಂದೇಶ ರವಾನಿಸಲಾಗಿದೆ.
ಇದೇ ಅವಧಿಯಲ್ಲಿ ಮಾದಕ ವಸ್ತು ಸೇವನೆ ಮತ್ತು ಸರಬರಾಜುನಲ್ಲಿ ಕಂಡುಬಂದಿರುವ ಒಟ್ಟು 746 ಅಪರಾಧಿಗಳಲ್ಲಿ 18ರಿಂದ 30 ವಯೋಮಾನದವರ ಸಂಖ್ಯೆ 593 ಆಗಿದ್ದು, 31ರಿಂದ 40 ವಯೋಮಾನದವರ ಸಂಖ್ಯೆ 107 ಆಗಿದೆ.
ಈ ಅಂಕಿ ಅಂಶಗಳ ಮೂಲಕ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಯುವ ಸಮುದಾಯ ಈ ಮಾದಕ ವಸ್ತುಗಳ ಜಾಲದಲ್ಲಿ ಸಿಲುಕಿರುವುದು ಕಂಡುಬರುತ್ತಿದ್ದು, ಇದು ತೀರಾ ಕಳವಳಕಾರಿಯಾಗಿದೆ.
ಜಿಲ್ಲೆಯ ಯುವ ಸಮುದಾಯಕ್ಕೆ ಮತ್ತು ಸಾರ್ವಜನಿಕರಿಗೆ ಮಾದಕ ವಸ್ತುಗಳ ಸೇವನೆ ಮತ್ತು ಅದರ ದುಷ್ಪರಿಣಾಮಗಳ ಕುರಿತಂತೆ ಜಾಗೃತಿ ಮತ್ತು ಅರಿವು ಮೂಡಿಸಲು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ 2025 ಜನವರಿಯಿಂದ ಇದುವರೆಗೆ 1,515 ಕಾರ್ಯಕ್ರಮಗಳನ್ನು ಆಯೋಜಿಸಿದ್ದು, 1,005 ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, 49,653 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಗಿದೆ.
527 ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಿ, 20,548 ಸಾರ್ವಜನಿಕರೊಂದಿಗೆ ಸಂವಾದ ನಡೆಸಲಾಗಿದೆಯಲ್ಲದೇ, ಮಾದಕ ವಸ್ತು ಮುಕ್ತ ಕರ್ನಾಟಕ ಹೆಸರಿನಲ್ಲಿ ಆಯೋಜಿಸಿದ್ದ 5 ಕಿ.ಮೀ ಮತ್ತು 10 ಕಿ.ಮೀ ನ ಮ್ಯಾರಾಥಾನ್ನಲ್ಲಿ 1500ಕ್ಕೂ ಅಧಿಕ ಮಂದಿ ಭಾಗವಹಿಸಿ ಮಾದಕ ವಸ್ತುಗಳ ವಿರುದ್ಧ ಸಾಮಾಜಿಕ ಸಂದೇಶ ಸಾರಿದ್ದಾರೆ.
ತಮ್ಮ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ತಡೆ ಕುರಿತಂತೆ ಹೆಚ್ಚಿನ ನಿಗಾವಹಿಸಿವೆ. ಪೊಲೀಸ್ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್ಗಳಲ್ಲಿ ಬಿಗು ತಪಾಸಣೆ ನಡೆಸಲಾಗುತ್ತಿದ್ದು, ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಎನ್.ಡಿ.ಪಿ.ಎಸ್ ಕಾಯ್ದೆಯ ಬಗ್ಗೆ ತರಬೇತಿ ಕಾರ್ಯಗಾರಗಳನ್ನು ಆಯೋಜಿಸಲಾಗಿದೆ.
ಅಂಚೆ ಮತ್ತು ಕೊರಿಯರ್ ಮೂಲಕ ಸ್ವೀಕೃತವಾಗುವ ಅನುಮಾನಾಸ್ಪದ ಪಾರ್ಸೆಲ್ಗಳನ್ನು ಕೂಡ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕಾರವಾರ ಬಂದರಿಗೆ ಆಗಮಿಸಿಸುವ ವಿದೇಶಿ ಹಡಗುಗಳು ಮತ್ತು ಬೋಟ್ಗಳನ್ನೂ ತಪಾಸಣೆ ಮಾಡಲಾಗುತ್ತಿದ್ದು, ಎನ್ಕಾರ್ಡ್ ಸಭೆಯನ್ನು ಪ್ರತೀ ತಿಂಗಳು ನಿಯಮಿತವಾಗಿ ನಡೆಸುವ ಮೂಲಕ ಎಲ್ಲಾ ಇಲಾಖೆಗಳಿಗೆ ಜವಾಬ್ದಾರಿ ನಿಗಧಿಗೊಳಿಸಿ, ಕಡ್ಡಾಯವಾಗಿ ವರದಿ ಪಡೆಯಲಾಗುತ್ತಿದೆ. ಜಿಲ್ಲೆಯನ್ನು ಮಾದಕ ವಸ್ತು ಮುಕ್ತ ಜಿಲ್ಲೆಯನ್ನಾಗಿಸುವ ಗುರಿ ಹೊಂದಲಾಗಿದೆ.
– ಕೆ.ಲಕ್ಷ್ಮೀಪ್ರಿಯಾ,
ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ.