ಯಲ್ಲಾಪುರ: ತಾಲೂಕಿನ ಚಿನ್ನೆಹುಕ್ಕಳ್ಳಿ ಗ್ರಾಮದ ಯುವಕನೊಬ್ಬ ಮದುವೆ ವಿಷಯವಾಗಿ ಸಂದೇಶ ಕಳಿಸಿ ಮನೆ ಬಿಟ್ಟು ಹೋಗಿರುವ ಘಟನೆ ವರದಿಯಾಗಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದಾರೆ.
ಫಿರ್ಯಾದುದಾರ ವಿಷ್ಣು (23) ಅವರು ನೀಡಿದ ದೂರಿನ ಪ್ರಕಾರ, ಅವರ ಅಣ್ಣ ಸತೀಶ (26) ಅವರು ಮಾರ್ಚ್ 28ರಂದು ಮಧ್ಯಾಹ್ನ ಸುಮಾರು 3.23 ಗಂಟೆ ಸುಮಾರಿಗೆ ಮೊಬೈಲ್ ಮೂಲಕ “ಈ ಮದುವೆ ನನಗೆ ಇಷ್ಟ ಇಲ್ಲ, ಅದಕ್ಕಾಗಿ ಮನೆ ಬಿಟ್ಟು ಹೋಗುತ್ತಿದ್ದೇನೆ” ಎಂದು ಇಂಗ್ಲಿಷ್‌ನಲ್ಲಿ ಸಂದೇಶ ಕಳುಹಿಸಿ ಬಳಿಕ ಎಲ್ಲಿಗೂ ಸಂಪರ್ಕಿಸದೆ ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸತೀಶ ಅವರು ತಮ್ಮ ಮನೆಗೆ ಮಾತ್ರವಲ್ಲದೆ ಸಂಬಂಧಿಕರ ಮನೆಗಳಿಗೂ ತೆರಳಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಕಾಣೆಯಾದ ಯುವಕನ ವಿವರ:
- ಹೆಸರು: ಸತೀಶ (ತಂದೆ: ರಮೇಶ ಮಳಿಕ)
- ವಯಸ್ಸು: 26 ವರ್ಷ
- ಉದ್ಯೋಗ: ಕಾರ್ಪೆಂಟರ್
- ವಿಳಾಸ: ಚಿನ್ನೆಹುಕ್ಕಳ್ಳಿ, ಪೋಸ್ಟ್ ಕನ್ನಡಗಲ್, ಯಲ್ಲಾಪುರ ತಾಲೂಕು
ಲಕ್ಷಣಗಳು:
- ಎತ್ತರ: ಸುಮಾರು 5 ಅಡಿ 5 ಇಂಚು
- ಮೈಕಟ್ಟು: ಸಾಮಾನ್ಯ, ಗೋದಿ ಮೈಬಣ್ಣ
- ಮುಖಚಹರೆ: ಉದ್ದ ಮುಖ, ಕಪ್ಪು ಕೂದಲು, ದಾಡಿ
ಧರಿಸಿದ್ದ ಉಡುಪು:
- ಬೂದಿ ಬಣ್ಣದ ಬ್ಯಾಗಿ ಪ್ಯಾಂಟ್
- ಹಳದಿ ಬಣ್ಣದ ಶರ್ಟ್
ಈ ಯುವಕನ ಬಗ್ಗೆ ಮಾಹಿತಿ ತಿಳಿದವರು ಸಮೀಪದ ಪೊಲೀಸ್ ಠಾಣೆಗೆ ತಿಳಿಸಲು ಪೊಲೀಸರು ಮನವಿ ಮಾಡಿದ್ದಾರೆ.