ಕಾರವಾರ: ಜೋಯಿಡಾ ತಾಲೂಕು ವ್ಯಾಪ್ತಿಯ 16 ಗ್ರಾಮಗಳಲ್ಲಿ 3 ದಿನಗಳಿಂದ ಏಕ ಕಾಲದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡು ಎಲ್ಲರ ಸಹಕಾರದಿಂದ ಸ್ವಚ್ಛತಾ ಕಾರ್ಯವನ್ನು ಅತ್ಯಂತ ಯಶಸ್ವಿ ಮತ್ತು ಮಾದರಿಯಾಗಿ ನಡೆಸಲಾಗುತ್ತಿದೆ ಎಂದು ತಹಸೀಲ್ದಾರ್ ಮಂಜುನಾಥ ಮುನೊಳ್ಳಿ ಹೇಳಿದರು.
ಅವರು ಬುಧವಾರ ಜೋಯಿಡಾ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಸಕ ಆರ್.ವಿ. ದೇಶಪಾಂಡೆ ಅವರ ನಿರ್ದೇಶನದಂತೆ ತಾಲೂಕಿನಾದ್ಯಂತ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಲಾಗುವುದು ಹಾಗೂ ಶಾಸಕರು ಪ್ರತಿ ಗ್ರಾಮಗಳಿಗೂ ದಾನಿಗಳಿಂದ ರೂ.25 ಸಾವಿರ ಮೊತ್ತದ ಸ್ವಚ್ಛತಾ ಪರಿಕರಗಳನ್ನು ಒದಗಿಸಲು ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಪ್ರತಿ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದರು.
ಜೋಯಿಡಾ ತಾಲೂಕು ಹಂತ ಹಂತವಾಗಿ ಅಭಿವೃದ್ಧಿಯಾಗುತ್ತಿದ್ದು, ಸುಂದರ ರಮಣೀಯ ಪರಿಸರವನ್ನು ಹೊಂದಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಇಲ್ಲಿನ ಪರಿಸರಕ್ಕೆ ಧಕ್ಕೆಯಾಗದ ರೀತಿ ಕಸವನ್ನು ಎಲ್ಲೆಂದರಲ್ಲಿ ಬಿಸಾಡುವ ಬದಲು ಕಸದ ಬುಟ್ಟಿಗಳಲ್ಲಿ ಹಾಕಬೇಕು ಎಂದ ಅವರು, ತಾಲೂಕನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ತಾಲೂಕಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಸ್ವಚ್ಛತಾ ಅಭಿಯಾನದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಎನ್, ಗ್ರಾಮ ಪಂಚಾಯತ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಎನ್ಆರ್ಎಲ್ಎಂ ಸದಸ್ಯರು, ವಿವಿಧ ಸ್ವಸಹಾಯ ಸಂಘದ ಪದಾಧಿಕಾರಿಗಳು, ವ್ಯಾಪಾರಸ್ಥ ಸಂಘದ ಸದಸ್ಯರು, ಸ್ವಯಂ ಸೇವಕರು, ಸಾರ್ವಜನಿಕರು ಇದ್ದರು.