ಮೈಸೂರು : ಗ್ಯಾರಂಟಿ ಯೋಜನೆಗಳ ನೆಪದಲ್ಲಿ ರಾಜ್ಯ ಸರ್ಕಾರ ಜನಸಾಮಾನ್ಯರ ಹಣವನ್ನು ದುರುಪಯೋಗ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್ ಆರೋಪಿಸಿದರು.
ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಅಹಿಂದ ರೈತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನೂತನ ತಾಲ್ಲೂಕು ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ “ಅಕ್ಷರ ಮತ್ತು ಆರೋಗ್ಯ ಉಚಿತ” ಎಂಬ ಘೋಷವಾಕ್ಯವನ್ನು ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಶಿಕ್ಷಣದಿಂದಲೇ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ. ಆದರೆ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದು, ಜನರಿಗೆ ಅನ್ನ ನೀಡುತ್ತಿರುವ ಸರ್ಕಾರ ಅಕ್ಷರ ನೀಡುವುದರಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು. “ಅಕ್ಷರ ಮತ್ತು ಆರೋಗ್ಯ ಉಚಿತವಾಗಿದ್ದರೆ ಅನ್ನ ಸ್ವತಃ ಹುಟ್ಟುತ್ತದೆ” ಎಂದು ಅಭಿಪ್ರಾಯಪಟ್ಟರು.
ಹಿಂದಿನ ನಾಯಕರಾದ ಡಿ. ದೇವರಾಜ್ ಅರಸು, ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ವೀರಪ್ಪ ಮೋಯಿಲಿ ಹಾಗೂ ಬಂಗಾರಪ್ಪ ಸೇರಿದಂತೆ ಅನೇಕರು ಸಮಾಜಮುಖಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ಆದರೆ ಇಂದಿನ ಸರ್ಕಾರ ಕೇಂದ್ರದಿಂದ ಬಂದ ಆಹಾರವನ್ನು ತಾನೇ ನೀಡುತ್ತಿರುವಂತೆ ಹೇಳಿಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಮಹಿಳಾ ಸಬಲೀಕರಣದ ಅಗತ್ಯತೆಯನ್ನು ಒತ್ತಿಹೇಳಿದ ಅವರು, ಯಶಸ್ವಿನಿ ಯೋಜನೆ ಮೂಲಕ ಉಚಿತ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಸ್ಮರಿಸಿದರು.
ಗ್ಯಾರಂಟಿ ಯೋಜನೆಗಳಡಿ ಮಹಿಳೆಯರಿಗೆ ನೀಡಬೇಕಾದ ಹಣವೂ ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಆರೋಪಿಸಿದರು.ರಾಜ್ಯದಲ್ಲಿ ಸಾಲದ ಭಾರ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿ, “ಈ ಸಾಲವನ್ನು ತೀರಿಸುವವರು ಯಾರು ಎಂಬುದನ್ನು ಜನ ಯೋಚಿಸಬೇಕು. ಸರ್ಕಾರ ಜನರಿಗೆ ಹಣ ಕೊಡುವುದಕ್ಕಿಂತ ಉದ್ಯೋಗವನ್ನು ನೀಡಬೇಕು” ಎಂದು ಹೇಳಿದರು.
ತೆರಿಗೆ ಹಣವನ್ನು ದುಂದು ವೆಚ್ಚ ಮಾಡುತ್ತಿರುವ ಸರ್ಕಾರದ ವಿರುದ್ಧ ಸಂಘಟನೆಗಳು ಜಾಗೃತಿಯಾಗಬೇಕು, ಆದರೆ ಚುನಾವಣಾ ರಾಜಕಾರಣಕ್ಕೆ ಒಳಗಾಗಬಾರದು ಎಂದು ಸಲಹೆ ನೀಡಿದರು.
ರಾಜ್ಯಾಧ್ಯಕ್ಷ ಸೋಮನಳ್ಳಿ ಶಿವಶೇಖರ್ ಮಾತನಾಡಿ, ಸಂಘಟನೆ ಜಾತ್ಯತೀತ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಸಾಮಾಜಿಕ ನ್ಯಾಯ, ನಾಡು-ನುಡಿಯ ರಕ್ಷಣೆ ನಮ್ಮ ಪ್ರಮುಖ ಗುರಿಯಾಗಿದೆ ಎಂದರು. ರೈತರಿಗೆ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ವಿಶೇಷವಾಗಿ ತಂಬಾಕಿಗೆ ಬೆಲೆ ಇಲ್ಲದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟನೆ ಅಗತ್ಯವಿದೆ ಎಂದು ತಿಳಿಸಿದರು.
ಸಭೆಯ ಪ್ರಮುಖ ನಿರ್ಣಯಗಳು:
ಹುಣಸೂರು ಉಪವಿಭಾಗವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು
ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಗ್ರಾಮ ಪಂಚಾಯಿತಿ ಮಾದರಿಯಲ್ಲಿ ಮೀಸಲಾತಿ ಜಾರಿಗೆ ತರಬೇಕು
ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಶೇ.50 ಮೀಸಲಾತಿ ನೀಡಬೇಕು
ಸಹಕಾರ ಕ್ಷೇತ್ರದಲ್ಲೂ ಮೀಸಲಾತಿ ಕಲ್ಪಿಸಬೇಕು
ವಿಧಾನ ಪರಿಷತ್ತಿಗೆ ರೈತರನ್ನು ನಾಮ ನಿರ್ದೇಶನ ಮಾಡಬೇಕು
ಸನ್ಮಾನ ಹಾಗೂ ನೇಮಕಾತಿ:ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಬೋಪಯ್ಯ, ಪ್ರಗತಿಪರ ರೈತರಾದ ಭರತ್ ಅರಸ್, ಫ್ರಾನ್ಸಿಸ್ ಹಾಗೂ ಶಿವಪ್ಪರನ್ನು ಸನ್ಮಾನಿಸಲಾಯಿತು. ರಾಜ್ಯ ಮಹಿಳಾ ಕಾರ್ಯದರ್ಶಿಯಾಗಿ ಮಮತಾ ಹಾಗೂ ಜಿಲ್ಲಾ ಮಹಿಳಾ ಅಧ್ಯಕ್ಷೆಯಾಗಿ ಅನುಪಮ ಆರ್ಯರನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಡಾ. ಲೋಹಿತ್, ಲೋಕೇಶ್ ಸಾಗರ್, ನವಿಲೂರು ಚನ್ನಪ್ಪ, ವಾಸುದೇವ ರೆಡ್ಡಿ, ಉಮಾಕ್ಷಿ ಗೌಡ, ಭಾಗ್ಯ ಗೌಡ, ದಿವ್ಯ ಜ್ಯೋತಿ, ಬೆಮ್ಮತಿ ಚಂದ್ರು, ಸಿದ್ದೇಗೌಡ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.