ಯಲ್ಲಾಪುರ: ಮುಂದೆ ಗುರಿ, ಹಿಂದೆ ಗುರು ಇರಬೇಕು ಎಂಬಂತೆ, ಯಾವುದೇ ಸಾಧನೆಯ ಮಾರ್ಗದಲ್ಲಿ ಸಾಗಲು ಮಾರ್ಗದರ್ಶನ, ಆಶೀರ್ವಾದ, ನಂಬಿಕೆ, ಆತ್ಮವಿಶ್ವಾಸ ಬಹಳ ಮುಖ್ಯ.
ಯಲ್ಲಾಪುರ ತಾಲೂಕಿನ ಕಂಚಿಮನೆಯ ಅಣ್ಣಯ್ಯ ಗಾಂವ್ಕರ-ವಿದ್ಯಾ ಗಾಂವ್ಕರ ಇವರ ಪುತ್ರಿ ಸುಮೇಧಾ ಅಣ್ಣಯ್ಯ ಗಾಂವ್ಕರ ಬಾಲ್ಯದಿಂದಲೂ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿ ಯಶಸ್ಸಿನ ಒಂದೊಂದೇ ಮೆಟ್ಟಿಲುಗಳನ್ನು ಏರಿ, ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ.
19ನೇ ಅಂತಾರಾಷ್ಟ್ರೀಯ ಪುಟಾಣಿ ವಿಜ್ಞಾನ ಪರೀಕ್ಷೆಯಲ್ಲಿ ಜಿಲ್ಲೆಗೆ 3ನೇ ಸ್ಥಾನ ಗಳಿಸಿದ್ದಲ್ಲದೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಯೋಗಾಸನ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶವನ್ನೂ ಪಡೆದರು.
ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸುವ ಹೊತ್ತಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿಯನ್ನು ಹೆಚ್ಚಿಸಿಕೊಂಡರು.
ದಾವಣಗೆರೆಯಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲೀ ಹಮಾಸಂಸ್ಥಾನದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದು ಶ್ರೀಗಳ ಆಶೀರ್ವಾದ ಪಡೆದುಕೊಂಡರು.
ಶಿರಸಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಡೆಸಿದ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಜಿಲ್ಲೆಗೆ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಎನ್ಪಿಸಿಎಲ್ ಕೈಗಾ ಇವರು ಆಯೋಜಿಸಿದ್ದ ʻಭ್ರಷ್ಟಾಚಾರ ಮುಕ್ತ ಭಾರತʼ ವಿಷಯದ ಕುರಿತ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನೂ ಪಡೆದುಕೊಂಡರು.
2020ರಲ್ಲಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 606 ಅಂಕಗಳ ಸಾಧನೆಯನ್ನೂ ಮೆರೆದರು. ನಂತರ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ.ಪೂ ಕಾಲೇಜಿನಲ್ಲಿ ಪ್ರವೇಶ ಪಡೆದರು. ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನಡೆದ ಆಶುಭಾಷಣ ಸ್ಪರ್ಧೆಯಲ್ಲಿ ದ್ವಿತೀಯ, ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಭಗವದ್ಗೀತಾ ಭಾಷಣ ಸ್ಪಋಧೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಪಡೆದುಕೊಂಡರು.
ಇವಿಷ್ಟೇ ಅಲ್ಲದೆ, ತುಮಕೂರಿನಲ್ಲಿ 2024-25ರಲ್ಲಿ ನಡೆದ ಆಶುಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ, ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜನ್ಮಭೂಮಿಗೆ ಕೀರ್ತಿ ತಂದಿದ್ದಾರೆ.
ಪಠ್ಯೇತರ ಚಟುವಟಿಕೆಗಳೊಂದಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 95ರಷ್ಟು ಫಲಿತಾಂಶವನ್ನೂ ದಾಖಲಿಸಿದರು.
ಪ್ರಸ್ತುತ ಕುಮಟಾದ ಡಾ. ಎ.ವಿ. ಬಾಳಿಗಾ ಮಹಾವಿದ್ಯಾಲಯದಲ್ಲಿ ಬಿಎಸ್ಸಿ ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ಮೊದಲ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. 16ನೇ ರಾಷ್ಟ್ರೀಯ ಮತದಾರರ ದಿನದ ನಿಮಿತ್ತ ಕಾರವಾರದ ಜಿ. ಪಂ ಕಾರ್ಯಾಲಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು, ಬೆಂಗಳೂರಿನಲ್ಲಿ ರಾಜ್ಯಪಾಲರಾದ ಥಾವರ್ಚಂದ ಗೆಹ್ಲೋಟ್ ಅವರಿಂದ ಗೌರವವನ್ನೂ ಸ್ವೀಕರಿಸಿ, ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬು ಕುಮಾರ್ ಅವರಿಂದ ಪುರಸ್ಕಾರ ಪಡೆದು ಜಿಲ್ಲೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಪಸರಿಸಿದ್ದಾರೆ.
ಈ ಎಲ್ಲ ಸಾಧನೆಗಳ ಮುಕುಟವಾಗಿ, ಇತ್ತೀಚೆಗೆ ರಾಜ್ಯ ಶ್ರೀ ಅಖಿಲ ಹವ್ಯಕ ಮಹಾಸಭಾ ಆಯೋಜಿಸಿದ್ದ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಾಧಕ ವಿದ್ಯಾರ್ಥಿಗಳಿಗೆ ಕೊಡಲ್ಪಡುವ ʻಹವ್ಯಕ ಪಲ್ಲವ-2026ʼ ಪುರಸ್ಕಾರಕ್ಕೆ ಸುಮೇಧಾ ಗಾಂವ್ಕರ ಭಾಜನರಾಗಿರುವುದು ತಾಲೂಕಿನ, ಗ್ರಾಮದ ಜನತೆಯಲ್ಲಿ ಹೆಮ್ಮೆಯ ಭಾವ ಮೂಡಿಸಿದೆ.