ಯಲ್ಲಾಪುರ: ನಾವು ಯಾವುದಕ್ಕೂ ಯಾವುದೇ ಅಪೇಕ್ಷೆ ಬಯಸಿ ಕೆಲಸ ಮಾಡುವುದಿಲ್ಲ. ಕೆಲಸದಿಂದ ತೃಪ್ತಿ ಸಿಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ತಾಲೂಕಿನ ಚಂದಗುಳಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ನಿಷ್ಕಾಮದಿಂದ ಮಾಡುವ ಕರ್ಮವೇ ನನ್ನನ್ನು ರಾಜಕೀಯವಾಗಿ, ಸಾಮಾಜಿಕವಾಗಿ ಎತ್ತರಕ್ಕೇರುವಂತೆ ಮಾಡಿದೆ. ಬಡವರು, ಅಶಕ್ತರಿಗೆ ನೆರವಾಗುವುದು ನನಗೆ ನೆಮ್ಮದಿ ನೀಡುವ ಸಂಗತಿ. ನಮ್ಮ ಗಳಿಕೆಯಲ್ಲಿ ಕೆಲ ಭಾಗವನ್ನು ಸಮಾಜಕ್ಕೆ ನೀಡಬೇಕಾದದ್ದು ನನ್ನ ಕರ್ತವ್ಯ. ದೇವರ ಅನುಗ್ರಹ ಇರುವವರೆಗೆ ಈ ಕಾರ್ಯವನ್ನು ಮುಂದುವರಿಸುತ್ತೇನೆ ಎಂದರು.
ಮನುಷ್ಯನಿಗೆ ಬರುವ ಅತಿದೊಡ್ಡ ರೋಗ ಗರ್ವ ಮತ್ತು ಅಹಂಕಾರ. ಅದರಿಂದ ದೂರ ಇದ್ದಷ್ಟೂ ಉತ್ತಮ ವ್ಯಕ್ತಿಯಾಗಿ ಬದುಕಲು ಸಾಧ್ಯ ಎಂದ ಅವರು, ದೇವಸ್ಥಾನದ ಅಭಿವೃದ್ಧಿಗೆ, ಗಣಪತಿಯ ಸೇವೆಗೆ ಸದಾ ತೊಡಗಿಸಿಕೊಳ್ಳುವುದಾಗಿ ಭರವಸೆ ನೀಡಿದರು.
ಆಡಳಿತ ಮಂಡಳಿಯ ಸದಸ್ಯ ಎಲ್.ಪಿ. ಭಟ್ಟ ಗುಂಡ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಅನ್ನದಾನ, ಕಟ್ಟಡ ನಿರ್ಮಾಣ ಸೇರಿದಂತೆ ಹಲವು ನೆಲೆಯಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸುತ್ತಿರುವ ಶಾಸಕರಿಗೆ ಗೌರವ ಸಲ್ಲಿಸುವುದು ನಮ್ಮ ಕಾರ್ಯಕ್ರಮದ ಉದ್ದೇಶ ಎಂದರು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್ ಭಟ್ಟ ಮಾತನಾಡಿ, ಶಾಸಕರು ದೇವಸ್ಥಾನದ ಅಭಿವೃದ್ಧಿಗೆ ನಿರಂತರವಾಗಿ ಸಹಕರಿಸುತ್ತಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸಬೇಕಾದದ್ದು ನಮ್ಮ ಕರ್ತವ್ಯ ಎಂದರು.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮೂಹಿಕ ಹಿತವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಶಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಸರ್ಕಾರದ ಅನುದಾನಗಳನ್ನು ದೇವಸ್ಥಾನಕ್ಕೆ ಕೊಡಿಸುವದರೊಂದಿಗೆ ವೈಯಕ್ತಿಕವಾಗಿಯೂ ದೇವಸ್ಥಾನದ ವಿವಿಧ ಸೇವೆಗಳಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ. ದೇವಸ್ಥಾನದ ಆವಾರದಲ್ಲಿ ಅನ್ನದ ಛತ್ರ ನಿರ್ಮಾಣ ಹಾಗೂ ಮುಂಭಾಗದಿಂದ ಪ್ರವೇಶಿಸುವ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರು.
ಸೀಮಾ ಪರಿಷತ್ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವನಜಾಕ್ಷಿ ಹೆಬ್ಬಾರ, ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ಪ್ರಮುಖರಾದ ನರಸಿಂಹ ಭಟ್ಟ ಗುಂಡ್ಕಲ್, ನಾಗೇಶ ಭಟ್ಟ ಮಳಲಗಾಂವ ಇತರರು ಉಪಸ್ಥಿತರಿದ್ದರು.
ವೆಂಕಟರಮಣ ಭಟ್ಟ ಬೆಳಖಂಡ, ಗುರುನಂದನ ಭಟ್ಟ ವೇದಘೋಷ ಮಾಡಿದರು. ಅನ್ವಿತಾ ಭಟ್ಟ ಪ್ರಾರ್ಥಿಸಿದರು. ಆಡಳಿತ ಮಂಡಳಿಯ ಸದಸ್ಯ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಸ್ವಾಗತಿಸಿದರು. ಸುಬ್ರಾಯ ಭಟ್ಟ ಗುಂಡ್ಕಲ್ ನಿರ್ವಹಿಸಿ ವಂದಿಸಿದರು.