ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿ ವೇಂಕಟರಮಣ ದೇವಸ್ಥಾನದಲ್ಲಿ ಏಪ್ರಿಲ್ 2ರಂದು ನಡೆದ ಶ್ರೀಮನ್ಮಹಾರಥೋತ್ಸವವು ಭಕ್ತಿಭಾವದಿಂದ ವಿಜೃಂಭಣೆಯಿಂದ ನೆರವೇರಿತು.
ಸಾವಿರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು. ಉತ್ಸವದ ಹಿನ್ನೆಲೆಯಲ್ಲಿ ಅನೇಕ ತಾತ್ಕಾಲಿಕ ಅಂಗಡಿಗಳು ತೆರೆಯಲ್ಪಟ್ಟಿದ್ದು, ಭಕ್ತರ ಸಂಚಾರ ಹೆಚ್ಚಾಗಿತ್ತು. ದೇವರಿಗೆ ಅರ್ಪಿಸಲು ಕಡಲೆ, ಹೂವು ಸೇರಿದಂತೆ ವಿವಿಧ ವಸ್ತುಗಳನ್ನು ಭಕ್ತರು ತಂದಿದ್ದರು. ಉತ್ಸವದ ನಂತರ ಸ್ಥಳದಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳು, ಆಹಾರದ ಪ್ಯಾಕೆಟ್‌ಗಳು ಸೇರಿದಂತೆ ತ್ಯಾಜ್ಯ ವಸ್ತುಗಳು ಕೆಲವೆಡೆ ಹರಡಿರುವುದು ಕಂಡುಬಂತು.
ಈ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸ್ಥಳೀಯರು ಸ್ವಯಂಪ್ರೇರಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಸುಮಾರು 75ಕ್ಕೂ ಹೆಚ್ಚು ಮಂದಿ ಯಾವುದೇ ಭೇದ-ಭಾವವಿಲ್ಲದೆ ಒಂದಾಗಿ ಕಾರ್ಯನಿರ್ವಹಿಸಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದರು. ವರ್ಷದಿಂದ ವರ್ಷಕ್ಕೆ ನಡೆದುಕೊಂಡು ಬರುತ್ತಿರುವ ಈ ಸ್ವಚ್ಛತಾ ಸಂಸ್ಕೃತಿ ಸ್ಥಳೀಯರ ಪರಿಸರ ಜವಾಬ್ದಾರಿಗೆ ಸಾಕ್ಷಿಯಾಗಿದೆ.
ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಪರವಾಗಿ ಕರುಣಾಕರ ಭಟ್ ಅವರು ಮಾತನಾಡಿ, “ಉತ್ಸವವು ಯಶಸ್ವಿಯಾಗಿ ನೆರವೇರಿದ್ದು, ದೂರದೂರಿನಿಂದ ಬಂದ ಭಕ್ತರ ಸಹಭಾಗಿತ್ವ ಗಮನಾರ್ಹವಾಗಿದೆ. ಪ್ರತಿವರ್ಷವೂ ಸ್ಥಳೀಯರು ಸ್ವಚ್ಛತಾ ಕಾರ್ಯದಲ್ಲಿ ತೊಡಗುವುದು ಶ್ಲಾಘನೀಯ. ಮುಂದಿನ ಉತ್ಸವಗಳಲ್ಲಿ ಪರಿಸರ ಸಂರಕ್ಷಣೆಗೆ ಇನ್ನಷ್ಟು ಆದ್ಯತೆ ನೀಡಲಾಗುತ್ತದೆ” ಎಂದು ಹೇಳಿದರು.
ಸ್ಥಳೀಯರ ಈ ನಿರಂತರ ಸೇವಾ ಮನೋಭಾವ ಮತ್ತು ಸ್ವಚ್ಛತೆಗೆ ನೀಡುತ್ತಿರುವ ಮಹತ್ವಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ವರದಿ: ಉಷಾ ಭಟ್. ಮಂಜುಗುಣಿ
ಪತ್ರಿಕೋದ್ಯಮ ವಿದ್ಯಾರ್ಥಿನಿ,
ಎಂಜಿಎಂ ಕಾಲೇಜು, ಉಡುಪಿ.