ಯಲ್ಲಾಪುರ: ವಿದುಷಿ ಸುಮಾ ಹೆಗಡೆ ವಿದ್ಯಾರ್ಥಿಗಳಿಗೆ ತಾಯಿಯ ಮಮತೆ ತೋರಿಸುವ ಮೂಲಕ ಭರತನಾಟ್ಯ ಕಲೆಯನ್ನು ಧಾರೆ ಎರೆಯುತ್ತಿದ್ದಾರೆ. ಹಲವಾರು ವರ್ಷಗಳಿಂದ ತಾಲೂಕು ಹಾಗೂ ಜಿಲ್ಲೆಯ ವಿವಿಧೆಡೆ ನಿರಂತರವಾಗಿ ಭರತನಾಟ್ಯ ತರಬೇತಿ ನೀಡುವ ಮೂಲಕ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರ ಕಾರ್ಯ ಅನನ್ಯ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಹೇಳಿದರು.
ಅವರು ಇಲ್ಲಿನ ಎಪಿಎಂಸಿ ಆವಾರದ ಅಡಿಕೆ ಭವನದಲ್ಲಿ ಪಟ್ಟಣದ ಭಾರತಿ ನೃತ್ಯ ಕಲಾಕೇಂದ್ರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಆಶ್ರಯದಲ್ಲಿ ನಡೆದ ನೃತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾ.ನಿ.ಪ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರಭಾವತಿ ಗೋವಿ ಮಾತನಾಡಿ, ಭರತನಾಟ್ಯದ ವೇಷ ಭೂಷಣದಲ್ಲಿ ಮಕ್ಕಳು ನೃತ್ಯ ಮಾಡುವುದನ್ನು ನೋಡುವುದೇ ಸೊಗಸು. ನೃತ್ಯ ಪ್ರಸ್ತುತಪಡಿಸುತ್ತಿರುವ ಮಕ್ಕಳೊಂದಿಗೆ ವಿದುಷಿ ಸುಮಾ ಹಾಗೂ ಪಾಲಕರ ಪರಿಶ್ರಮವಿದೆ. ಮಾನಸಿಕ ನೆಮ್ಮದಿ ನೀಡುವ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಇದರಿಂದ ಮಕ್ಕಳಲ್ಲಿ ಖಿನ್ನತೆ ಸುಳಿಯದಂತೆ ಮಾಡಬಹುದು ಹಾಗೂ ಮೊಬೈಲ್ ಗೀಳಿನಿಂದ ದೂರವಿಡಬಹುದು ಎಂದರು.
ವಿಶ್ವದರ್ಶನ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್ಟ ಅಧ್ಯಕ್ಷತೆ ವಹಿಸಿ ಮಾತನಾಡಿ, ಭರತನಾಟ್ಯ ಕಲೆ ವಿದ್ಯಾಭ್ಯಾಸಕ್ಕೆ ಪೂರಕವಾಗಿದ್ದು, ಏಕಾಗ್ರತೆ ಹೆಚ್ಚಿಸುತ್ತದೆ. ಸುಮಾ ಅವರಂತಹ ಗುರುಗಳು ಸಿಗುವದು ವಿರಳ. ಈ ಕಲೆಯ ಮೂಲಕ ನಿಮ್ಮ ಅವಕಾಶಗಳನ್ನು ನೀವೇ ಸೃಷ್ಟಿಸಿಕೊಳ್ಳಬಹುದಾಗಿದೆ ಎಂದರು.
ಮಹಿಳಾ ಉದ್ಯಮಿ ಅಪರ್ಣಾ ಘಟ್ಟಿ ಮಾತನಾಡಿ, ಮಹಿಳೆಯರು ಸಂಸಾರದ ಜೊತೆಗೇ ವೃತ್ತಿ ಜೀವನ ನಡೆಸಿಕೊಂಡು ಹೋಗುವದುವದು ಕಷ್ಟ ಸಾಧ್ಯವಾದರೂ ಸುಮಾ ಅವರು ಭರತನಾಟ್ಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಭರತನಾಟ್ಯದ ಮೂಲಕ ಪೌರಾಣಿಕ ಕಥೆ ಅರಿಯಬಹುದಾಗಿದೆ ಎಂದರು.
ಕೇಂದ್ರದ ನೃತ್ಯ ಗುರು ವಿದುಷಿ ಸುಮಾ ಹೆಗಡೆ ಗುರುವಂದನೆ ಸ್ವೀಕರಿಸಿ ಮಾತನಾಡಿ, ಭರತನಾಟ್ಯ ಕಲೆಗೆ ತಾಳ್ಮೆ, ಶೃದ್ಧೆ ಬೇಕು. ಕಲಿಕೆ ಒಂದೇ ದಿನಕ್ಕೆ ಬರುವದಿಲ್ಲ. ಅದಕ್ಕೆ ಅನುದಿನವೂ ಪರಿಶ್ರಮ ಬೇಕು. ಪಾಲಕರು, ಮಕ್ಕಳು ನನ್ನ ಮೇಲಿಟ್ಟ ಪ್ರೀತಿ-ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ ಎಂದರು.
ಶಿಕ್ಷಕಿ ಸವಿತಾ ಭಟ್ಟ ಮಾತನಾಡಿದರು. ಕಲಾಕೇಂದ್ರದ ಅಧ್ಯಕ್ಷ ವಿ.ಟಿ. ಹೆಗಡೆ ಇತರರು ಇದ್ದರು. ನಿರ್ಮಲಾ ಭಾಗವತ ಸ್ವಾಗತಿಸಿದರು. ಪೂಜಾ ನಿರ್ವಹಿಸಿದರು. ರಂಜನಾ ವಂದಿಸಿದರು. ಲಕ್ಷ್ಮಿ ಭಟ್ ಚಿಮ್ನಳ್ಳಿ ಗುರುವಂದನೆ ನಡೆಸಿಕೊಟ್ಟರು. ನಂತರ ಭಾರತೀ ನೃತ್ಯ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ನಡೆದ ನೃತ್ಯ ಪ್ರದರ್ಶನ ಜನಮನ ರಂಜಿಸಿತು.