ಗ್ರಾಮೀಣ ಸಾರಿಗೆ ಸಮಸ್ಯೆಗೆ ಪರಿಹಾರ ಬೇಕು: ಪ್ರಸಾದ್ ಹೆಗಡೆ
ಯಲ್ಲಾಪುರ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್‌ಗಳ ಬಾಗಿಲಲ್ಲಿ ನೇತಾಡುತ್ತಾ ಪ್ರಯಾಣಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದ್ದು, ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಪ್ರಸಾದ್ ಹೆಗಡೆ ಆಗ್ರಹಿಸಿದ್ದಾರೆ.
ಕಿರವತ್ತಿ ಸೇರಿದಂತೆ ಹಲವು ಗ್ರಾಮಗಳ ವಿದ್ಯಾರ್ಥಿಗಳು ಪ್ರತಿನಿತ್ಯ ಜೀವವನ್ನು ಪಣಕ್ಕಿಟ್ಟು ಶಾಲೆ-ಕಾಲೇಜಿಗೆ ತೆರಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಬಸ್‌ಗಳಲ್ಲಿ ಸೀಟ್ ಸಿಗದೇ, ಬಾಗಿಲಲ್ಲೇ ನೇತಾಡಿಕೊಂಡು ಪ್ರಯಾಣಿಸುವ ದೃಶ್ಯಗಳು ಆತಂಕಕಾರಿ ಎಂದು ತಿಳಿಸಿದ್ದಾರೆ.
ಸ್ಥಳೀಯ ಪಾಲಕರು ಹಾಗೂ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಈ ಕುರಿತು ವಿಡಿಯೊಗಳನ್ನು ಒದಗಿಸಿದ್ದು, ಸಮಸ್ಯೆಯ ತೀವ್ರತೆಯನ್ನು ಗಮನಕ್ಕೆ ತಂದಿದ್ದಾರೆ.
ಇತ್ತೀಚೆಗೆ ಡೊಮಗೇರಿ ಭಾಗಕ್ಕೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಸುಧಾರಿಸುವಂತೆ ಮನವಿ ಮಾಡಿದ್ದು, ವಿದ್ಯಾರ್ಥಿನಿಯೊಬ್ಬಳು ಕಣ್ಣೀರು ಹಾಕುತ್ತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾಳೆ ಎಂದು ಪ್ರಸಾದ್ ಹೆಗಡೆ ತಿಳಿಸಿದ್ದಾರೆ.
ಸಂಜೆ 5 ಗಂಟೆಗೆ ಯಲ್ಲಾಪುರದಿಂದ ಡೊಮಗೇರಿಗೆ ಬರಬೇಕಾದ ಕೆಎಸ್‌ಆರ್‌ಟಿಸಿ ಬಸ್ ಸಂಜೆ 6.30ಕ್ಕೆ ಬಂದ ಘಟನೆ ನಡೆದಿದ್ದು, ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಪರಿಸ್ಥಿತಿ ಮುಂದುವರಿದರೆ ಗ್ರಾಮೀಣ ಭಾಗದ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವ ಸಾಧ್ಯತೆಯಿದ್ದು, ಶಿಕ್ಷಣದ ಮೇಲೆಯೇ ದುಷ್ಪರಿಣಾಮ ಬೀರುವ ಆತಂಕವಿದೆ ಎಂದು ಅವರು ಎಚ್ಚರಿಸಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಅಲ್ಲಿನ ಶಾಲೆಗಳೇ ವಿದ್ಯಾರ್ಥಿಗಳ ಕೊರತೆಯಿಂದ ಬೀಗ ಹಾಕುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅಭಿಪ್ರಾಯಪಟ್ಟಿರುವ ಅವರು, ಯಲ್ಲಾಪುರ ಗ್ರಾಮೀಣ ಭಾಗಗಳಿಗೆ ಸಮರ್ಪಕ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ʻಕಾಂಗ್ರೆಸ್ ಬೆಂಬಲಿತ ಶಾಸಕʼರನ್ನು ವಿನಯಪೂರ್ವಕವಾಗಿ ಆಗ್ರಹಿಸಿದ್ದಾರೆ.