ಯಲ್ಲಾಪುರ: ತಾಲೂಕಿನ ನಂದೊಳ್ಳಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರೀರಾಮಲಿಂಗೇಶ್ವರ ನಾಟ್ಯ ನಾಟಕ ಕಲಾ ಬಳಗ ಆಯೋಜಿಸಿದ್ದ 13ನೇ ವರ್ಷದ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಟಿಎಂಎಸ್ ಮಾಜಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಉದ್ಘಾಟಿಸಿದರು.
ಎಲ್.ಎಸ್.ಎಂ.ಪಿ ಸೊಸೈಟಿ ನಿರ್ದೇಶಕ ನರಸಿಂಹ ಕೋಣೆಮನೆ ಅಧ್ಯಕ್ಷತೆ ವಹಿಸಿದ್ದರು. ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ಎಪಿಎಂಸಿ ಮಾಜಿ ಅಧ್ಯಕ್ಷ ಎಲ್.ಪಿ. ಭಟ್ಟ ಗುಂಡ್ಕಲ್, ರಂಗಭೂಮಿ ಕಲಾವಿದರ ವೇದಿಕೆಯ ಜಿಲ್ಲಾಧ್ಯಕ್ಷ ಜಯರಾಮ ಭಟ್ಟ, ಎಸ್.ಡಿ.ಎಂ.ಸಿ ಅಧ್ಯಕ್ಷ ಚಿನ್ಮಯ ಬೆಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ವೈದಿಕ ರಾಮಕೃಷ್ಣ ಭಟ್ಟ ಮಾಗೋಡ, ನಂದೊಳ್ಳಿಯ ಮಾಜಿ ಮಂಡಲ ಪ್ರಧಾನ ತಿಮ್ಮಣ್ಣ ಭಾಗ್ವತ, ಹಿರಿಯ ಕಲಾವಿದರಾದ ವೆಂಕಟರಮಣ ಭಾಗ್ವತ ಹಶಿನಮನೆ, ಸುಬ್ರಾಯ ಭಟ್ಟ ಕವಡಿಕೆರೆ ಹಾಗೂ ಕೃಷಿ ಕಾರ್ಮಿಕ ಕೇಶವ ಸಿದ್ದಿ ಅವರನ್ನು ಸನ್ಮಾನಿಸಲಾಯಿತು. ನಾಟಕ ಪ್ರದರ್ಶನಕ್ಕೆ ನಿರಂತರ ಸಹಕಾರ ನೀಡುತ್ತಿರುವ ಆರ್.ಆರ್. ಕುಲಕರ್ಣಿ ದಂಪತಿ ಅವರನ್ನು ಗೌರವಿಸಲಾಯಿತು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸುವ ಕಲಾ ಬಳಗದ ಕಾರ್ಯವನ್ನು ಗಣ್ಯರು ಶ್ಲಾಘಿಸಿದರು.
ಕಲಾ ಬಳಗದ ಅಧ್ಯಕ್ಷ ನಾಗರಾಜ ಕವಡಿಕೆರೆ ಸ್ವಾಗತಿಸಿದರು. ಸುಬ್ಬಣ್ಣ ಕಂಚಗಲ್, ಎಂ. ರಾಜಶೇಖರ, ಶ್ರೀಧರ ಭಟ್ಟ, ಶ್ರೀನಿವಾಸ ಕೋಡ್ನಗುಡ್ಡೆ ಸನ್ಮಾನಪತ್ರ ವಾಚಿಸಿದರು. ಕಾರ್ಯದರ್ಶಿ ಶಿವಾನಂದ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ನಂತರ ಬಳಗದ ಕಲಾವಿದರಿಂದ ‘ತಬ್ಬಲಿ ಮಗುವಿಗೆ ತಾಯಿ ಯಾರು’ ನಾಟಕ ಪ್ರದರ್ಶನ ನಡೆಯಿತು. ವಿ.ಟಿ. ಭಟ್ಟ ಕನಕನಹಳ್ಳಿ ತಂಡದವರು ಸಂಗೀತ ಸಹಕಾರ ನೀಡಿದರೆ, ಶೇಷಗಿರಿ ಚಿಕ್ಕಮಾವಳ್ಳಿ ಹಾಗೂ ಚಂದ್ರಶೇಖರ ಕಂಚನಮನೆ ರಂಗ ಸಹಕಾರ ನೀಡಿದರು.
ಕಲಾವಿದರು ವಿವಿಧ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದರು.