ಸಂಸ್ಕಾರದ ಬೀಜ ಬಿತ್ತಿದ 25 ವರ್ಷಗಳ ಪಯಣ
ಯಲ್ಲಾಪುರ: ಇಂದಿನ ವೇಗದ ಯುಗದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಪ್ರದಾಯ ಮತ್ತು ಭಾರತೀಯ ಮೌಲ್ಯಗಳ ಅರಿವು ನೀಡುವುದು ಅತ್ಯಂತ ಅಗತ್ಯವಾಗಿದೆ. ಪುಸ್ತಕ ಜ್ಞಾನ ಮಾತ್ರವಲ್ಲ, ಬದುಕಿನ ದಾರಿದೀಪವಾಗುವ ಮೌಲ್ಯ ಶಿಕ್ಷಣವೂ ಸಮಾನವಾಗಿ ಮುಖ್ಯವೆಂಬ ಚಿಂತನೆಯಿಂದ ಆರಂಭವಾದ ಒಂದು ಸಣ್ಣ ಪ್ರಯತ್ನ ಇಂದು 25 ವರ್ಷಗಳ ಯಶಸ್ವಿ ಪಯಣವನ್ನು ಪೂರೈಸಿ ರಜತ ಮಹೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗಿದೆ.
ತಾಲೂಕಿನ ನಂದೊಳ್ಳಿ ಗ್ರಾಮದ ಸುಳಗಾರ್‌ನಲ್ಲಿ ನಡೆಯುತ್ತಿರುವ ಶ್ರೀ ಅನಂತ ವೇದ ಪ್ರತಿಷ್ಠಾನದ ವಸಂತ ವೇದ ಶಿಬಿರವು ಅನೇಕ ಮಕ್ಕಳ ಬದುಕಿನಲ್ಲಿ ಸಂಸ್ಕಾರದ ಬೆಳಕನ್ನು ಹಚ್ಚಿದ ಕೇಂದ್ರವಾಗಿ ಬೆಳೆದಿದೆ.
ಬಾಲ್ಯದಲ್ಲೇ ಉತ್ತಮ ಚಿಂತನೆ, ಹಿರಿಯರಲ್ಲಿ ಗೌರವ, ಧಾರ್ಮಿಕ ಆಚರಣೆಗಳ ಅರ್ಥ, ವೇದ ಮಂತ್ರಗಳ ಮಹತ್ವ ಹಾಗೂ ಭಾರತೀಯ ಸಂಸ್ಕೃತಿಯ ಬೇರುಗಳನ್ನು ಮಕ್ಕಳಿಗೆ ಪರಿಚಯಿಸುವ ಅಪೂರ್ವ ಕಾರ್ಯವನ್ನು ಈ ಶಿಬಿರ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ನಿಭಾಯಿಸುತ್ತಿದೆ.
ಧಾರ್ಮಿಕ ಬದುಕಿನ ಪರಂಪರೆಯುಳ್ಳ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸುಳಗಾರ್ ಗ್ರಾಮದ ಕೃಷಿಕ ಕುಟುಂಬದಲ್ಲಿ ಸ್ವರ್ಗಸ್ಥ ಅನಂತ ಭಟ್ಟ ಸುಳಗಾರ್ ಜನಿಸಿದರು. ಬಾಲ್ಯದಲ್ಲಿಯೇ ಅವರು ದೇವಪೂಜಾ ಪದ್ಧತಿ, ವಿವಾಹ ಪ್ರಯೋಗ ಮುಂತಾದ ವಿಧಿವಿಧಾನಗಳ ಅಧ್ಯಯನ ಮಾಡಿದರು.
ಬಳಿಕ ಸುಮಾರು ನಾಲ್ಕು ದಶಕಗಳ ಕಾಲ ಗುರುಕುಲ ಪದ್ಧತಿಯಂತೆ ನಾನಾ ಊರುಗಳಿಗೆ ತೆರಳಿ ಮನೆಮನೆಗಳಲ್ಲಿ ವೇದಾಧ್ಯಯನ ಮಾಡುವ ಪಾಠಶಾಲೆಗಳನ್ನು ನಡೆಸಿ ಅನೇಕ ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪರಾದರು.
ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನೇ ಜೀವನ ಧ್ಯೇಯವನ್ನಾಗಿ ಮಾಡಿಕೊಂಡಿದ್ದ ಅವರ ಸಮಾಜಸೇವೆ ಮರೆಯಲಾಗದಂತಹದು. ಆ ಮಹನೀಯರ ನೆನಪು ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿ, ಅವರು ಬಿತ್ತಿದ ಸಂಸ್ಕಾರದ ಬೀಜ ಮುಂದಿನ ತಲೆಮಾರಿಗೆ ತಲುಪಲಿ ಎಂಬ ಸದುದ್ದೇಶದಿಂದಲೇ ಶ್ರೀ ಅನಂತ ವೇದ ಪ್ರತಿಷ್ಠಾನ ಹುಟ್ಟಿಕೊಂಡಿತು.
17-01-2000ರಂದು ಸಂಸ್ಥೆ ಅಧಿಕೃತವಾಗಿ ಸ್ಥಾಪನೆಯಾಯಿತು. ಒಂದು ತಲೆಮಾರನ್ನು ಸಂಸ್ಕಾರವಂತ ಸಮಾಜದ ನಾಗರಿಕರಾಗಿ ರೂಪಿಸಬೇಕೆಂಬ ಧ್ಯೇಯವೇ ಇದರ ಮೂಲ ಚಿಂತನೆಯಾಗಿತ್ತು. ಅದೇ ಚಿಂತನೆ ಇಂದು ನೂರಾರು ವಿದ್ಯಾರ್ಥಿಗಳ ಬದುಕಿನಲ್ಲಿ ಫಲ ನೀಡುತ್ತಿದೆ.
ಬೇಸಿಗೆ ರಜೆ ಎಂದರೆ ಕೇವಲ ಆಟ-ಮನರಂಜನೆ ಅಲ್ಲ. ಅದನ್ನು ಜ್ಞಾನ, ಶಿಸ್ತು ಮತ್ತು ಮೌಲ್ಯಗಳ ಕಲಿಕೆಯ ಹಬ್ಬವನ್ನಾಗಿಸಬೇಕು ಎಂಬ ಉದ್ದೇಶದಿಂದ ಪ್ರತಿವರ್ಷ ವಸಂತ ವೇದ ಶಿಬಿರ ಆಯೋಜಿಸಲಾಗುತ್ತಿದೆ. ಗ್ರಾಮೀಣ ಭಾಗದ ಮಕ್ಕಳಿಂದ ಹಿಡಿದು ವಿವಿಧ ಪ್ರದೇಶಗಳ ವಿದ್ಯಾರ್ಥಿಗಳವರೆಗೆ ಹಲವರು ಇಲ್ಲಿ ಭಾಗವಹಿಸಿ ಭಾರತೀಯ ಪರಂಪರೆಯ ಅಮೂಲ್ಯ ಸಂಪತ್ತನ್ನು ಅರಿಯುತ್ತಿದ್ದಾರೆ.
ಈ ಶಿಬಿರದ ವಿಶೇಷತೆ ಎಂದರೆ ಇಲ್ಲಿ ಪಾಠವಾಗುವುದು ಕೇವಲ ಮಂತ್ರಗಳ ಉಚ್ಚಾರಣೆಯಲ್ಲ. ಬದುಕನ್ನು ಸರಿಯಾದ ದಾರಿಯಲ್ಲಿ ನಡೆಸುವ ಮನೋಭಾವ, ಶಿಸ್ತಿನ ಜೀವನ, ಸಮಯಪಾಲನೆ, ದೇವರ ಭಕ್ತಿ, ಸಹಬಾಳ್ವೆ, ಸೇವಾ ಮನೋಭಾವ ಮತ್ತು ಸಂಸ್ಕೃತಿಯ ಮೇಲೆ ಗೌರವ ಇವೆಲ್ಲವೂ ಮಕ್ಕಳ ಮನಸ್ಸಿನಲ್ಲಿ ಬಿತ್ತಲ್ಪಡುತ್ತವೆ. ಅದಕ್ಕಾಗಿಯೇ ಈ ಶಿಬಿರವು ಕೇವಲ ಬೇಸಿಗೆ ಶಿಬಿರವಲ್ಲ, ಸಂಸ್ಕಾರ ಶಾಲೆಯಾಗಿ ಗುರುತಿಸಿಕೊಂಡಿದೆ.
25 ವರ್ಷಗಳ ನಿರಂತರ ಪಯಣದ ಬಳಿಕ 2026-27ನೇ ಸಾಲಿನಲ್ಲಿ ಶಿಬಿರವು ರಜತ ಮಹೋತ್ಸವ ವರ್ಷವನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷ ವ್ಯವಸ್ಥೆಗಳನ್ನೂ ಮಾಡಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಜೆ ವಸತಿ ವ್ಯವಸ್ಥೆ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಶಿಬಿರ ಸ್ಥಳದಲ್ಲೇ ಕಲ್ಪಿಸಲಾಗಿದೆ.
ಶಿಬಿರವು ಏಪ್ರಿಲ್ 15ರಿಂದ ಮೇ 15ರವರೆಗೆ ಒಂದು ತಿಂಗಳ ಕಾಲ ನಡೆಯಲಿದೆ. ದೇವಪೂಜಾ ಪದ್ಧತಿ, ಗಣಪತಿ ಉಪನಿಷತ್, ಸೂಕ್ತಗಳು, ರುದ್ರಪಾಠ, ಮಂತ್ರಪುಷ್ಪ ಸೇರಿದಂತೆ ಹಲವು ಅಧ್ಯಯನಗಳನ್ನು ಬೋಧಿಸಲಾಗುತ್ತದೆ. ಮೂರು ವರ್ಷದ ಅವಧಿಯಲ್ಲಿ ಸಮಗ್ರ ದೇವಪೂಜಾ ಪದ್ಧತಿಯ ಪಾಠ ಸಂಪೂರ್ಣಗೊಳ್ಳುತ್ತದೆ.
ಶಿಬಿರದ ಉದ್ಘಾಟನೆಯನ್ನು ವೇ.ಮೂ ಗೋಪಾಲಕೃಷ್ಣ ಭಟ್ಟ ನೇರ್ಲಮನೆ ನೆರವೇರಿಸಲಿದ್ದು, ವಿ.ಟಿ. ಭಟ್ಟ ಸುಳಗಾರ್ ಉಪಸ್ಥಿತರಿರುತ್ತಾರೆ. ಪ್ರತಿಷ್ಠಾನದ ಅಧ್ಯಕ್ಷ ವಿ.ಟಿ. ಹೆಗಡೆ ತೊಂಡೇಕೆರೆ ಹಾಗೂ ಪದಾಧಿಕಾರಿಗಳು ಸರ್ವರಿಗೂ ಸ್ವಾಗತ ಕೋರಿದ್ದಾರೆ.