ಕಾರವಾರ: ಕಾರವಾರ ಅಂಚೆ ವಿಭಾಗ ವ್ಯಾಪ್ತಿಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಪ್ರದೇಶಗಳಲ್ಲಿ ಅಂಚೆ ಜೀವ ವಿಮೆ (PLI) ಮತ್ತು ಗ್ರಾಮೀಣ ಅಂಚೆ ಜೀವ ವಿಮೆ (RPLI) ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಸಂಬಂಧಿತ ತಾಲೂಕಿನ ಖಾಯಂ ನಿವಾಸಿಗಳಾಗಿರಬೇಕು. ಅರ್ಜಿ ನಮೂನೆಯನ್ನು ಕಾರವಾರ ಅಂಚೆ ವಿಭಾಗದ ವ್ಯಾಪ್ತಿಯ ಯಾವುದೇ ಅಂಚೆ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅಂಚೆ ಅಧೀಕ್ಷಕರು, ಕಾರವಾರ ಅವರು ನಡೆಸುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಉತ್ತೀರ್ಣರಾಗಿದ್ದು, ಕಡ್ಡಾಯವಾಗಿ 18 ವರ್ಷ ಮೇಲ್ಪಟ್ಟಿರಬೇಕು. ಆಯ್ಕೆಯಾದ ಅಭ್ಯರ್ಥಿಗಳು ₹5,000 ಮೊತ್ತದ ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ್ ಪತ್ರದ ರೂಪದಲ್ಲಿ ಭದ್ರತಾ ಠೇವಣಿ ಇಡಬೇಕಾಗುತ್ತದೆ. ಪಡೆದುಕೊಂಡ ಪಾಲಿಸಿಗಳ ಆಧಾರದ ಮೇಲೆ ಪ್ರೋತ್ಸಾಹಧನ (ಇನ್ಸೆಂಟಿವ್) ನೀಡಲಾಗುವುದು. ಆಯ್ಕೆಯಾದ ಜೀವ ವಿಮಾ ಪ್ರತಿನಿಧಿಗಳಿಗೆ ನಿಗದಿತ ವೇತನ ಇರುವುದಿಲ್ಲ.
ಅಭ್ಯರ್ಥಿಗಳು ಬೇರೆ ಯಾವುದೇ ವಿಮಾ ಕಂಪನಿ, ಸಂಸ್ಥೆ ಅಥವಾ ಸಂಘಗಳ ಏಜೆಂಟ್ ಆಗಿರಬಾರದು.
ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆ, ಎಸ್ಎಸ್ಎಲ್ಸಿ ಅಂಕಪಟ್ಟಿ ಪ್ರತಿ, ಪೋಸ್ಟ್ ಆಫೀಸ್ ಉಳಿತಾಯ ಖಾತೆ ಪ್ರತಿ, ಪಾನ್ ಕಾರ್ಡ್ ಪ್ರತಿ ಹಾಗೂ ಆಧಾರ್ ಕಾರ್ಡ್ ಪ್ರತಿ ಸಹಿತ ಮೇ 12ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿ ಅಥವಾ ಅಂಚೆ ಅಭಿವೃದ್ಧಿ ಅಧಿಕಾರಿ 9945865299 ಅವರನ್ನು ಸಂಪರ್ಕಿಸಬಹುದು ಎಂದು ಕಾರವಾರ ಅಂಚೆ ವಿಭಾಗದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.