ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗದೇ ಹಿನ್ನಡೆಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಮಹಿಳೆಯರ ಕ್ಷಮೆಯಾಚಿಸಿ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಹಿಳೆಯರ ಹಕ್ಕುಗಳು ಮತ್ತು ಸಬಲೀಕರಣಕ್ಕಾಗಿ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿತ್ತು. ಆದರೆ ವಿಪಕ್ಷಗಳು ಅದನ್ನು ಸಂಸತ್ತಿನಲ್ಲಿ ತಡೆದು ಸೋಲಿಸಿದವು ಎಂದು ಆರೋಪಿಸಿದರು.
ಮಹಿಳಾ ಮೀಸಲಾತಿ ಮಸೂದೆ ದೇಶದ ಎಲ್ಲ ಭಾಗಗಳ ಮಹಿಳೆಯರಿಗೆ ರಾಜಕೀಯ ಶಕ್ತಿ ನೀಡುವ ಉದ್ದೇಶ ಹೊಂದಿತ್ತು. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಎಲ್ಲ ಪ್ರದೇಶಗಳ ಮಹಿಳೆಯರಿಗೆ ಇದು ಸಮಾನ ಅವಕಾಶ ಕಲ್ಪಿಸಬೇಕಾಗಿತ್ತು. ಆದರೆ ವಿಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಮಸೂದೆಯನ್ನು ಅಡ್ಡಿಪಡಿಸಿದವು ಎಂದು ಹೇಳಿದರು.
ಕಾಂಗ್ರೆಸ್, ಟಿಎಂಸಿ, ಡಿಎಂಕೆ ಸೇರಿದಂತೆ ಹಲವು ವಿಪಕ್ಷಗಳು ಮಹಿಳೆಯರ ಹಿತಾಸಕ್ತಿಗೆ ವಿರೋಧವಾಗಿ ನಡೆದುಕೊಂಡಿವೆ ಎಂದು ಮೋದಿ ಟೀಕಿಸಿದರು. ಮಹಿಳೆಯರ ಗೌರವ ಮತ್ತು ಸ್ವಾಭಿಮಾನಕ್ಕೆ ಧಕ್ಕೆಯುಂಟುಮಾಡಿದ ಈ ನಡೆಯನ್ನು ದೇಶದ ಮಹಿಳೆಯರು ಕ್ಷಮಿಸುವುದಿಲ್ಲ ಎಂದರು.
ಇದೇ ವೇಳೆ ಕಾಂಗ್ರೆಸ್ ಯಾವತ್ತೂ ಸುಧಾರಣಾ ಕ್ರಮಗಳಿಗೆ ವಿರೋಧ ವ್ಯಕ್ತಪಡಿಸುತ್ತ ಬಂದಿದೆ. ಜಿಎಸ್ಟಿ, ಕಲಂ 370 ರದ್ದುಪಡಿಸುವ ವಿಚಾರದಲ್ಲಿಯೂ ಕಾಂಗ್ರೆಸ್ ವಿರೋಧಿಸಿತ್ತು ಎಂದು ಅವರು ನೆನಪಿಸಿದರು.
ಮಹಿಳಾ ಮೀಸಲಾತಿ ಮಸೂದೆ ಸೋಲು ದೇಶದ ಮಹಿಳೆಯರಿಗೆ ನಿರಾಸೆ ತಂದಿದೆ. ಆದರೆ ಮಹಿಳಾ ಸಬಲೀಕರಣದತ್ತ ಸರ್ಕಾರದ ಬದ್ಧತೆ ಮುಂದುವರಿಯಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.