ಸ್ವಚ್ಛತೆಗೆ ಸವಾಲಾದ ನಿರ್ಲಕ್ಷ್ಯ
ಯಲ್ಲಾಪುರ: ಸ್ವಚ್ಛತೆ, ಸುಂದರತೆ ಮತ್ತು ಶಿಸ್ತಿನ ಮೂಲಕ ಮಾದರಿ ಪಟ್ಟಣವಾಗಿ ಗುರುತಿಸಿಕೊಂಡಿರುವ ಯಲ್ಲಾಪುರದಲ್ಲಿ ಇದೀಗ ಅಶಿಸ್ತಿನ ಕಸದ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ.
ಪಟ್ಟಣ ಪಂಚಾಯಿತಿಯಿಂದ ಪಟ್ಟಣ ಪ್ರದೇಶದಲ್ಲಿ ಮನೆಮನೆಗೆ ತೆರಳಿ ನಿಯಮಿತವಾಗಿ ಕಸ ಸಂಗ್ರಹಣಾ ವ್ಯವಸ್ಥೆ ನಡೆಯುತ್ತಿದ್ದರೂ, ಕೆಲವರ ನಿರ್ಲಕ್ಷ್ಯದ ವರ್ತನೆಯಿಂದ ರಸ್ತೆ ಬದಿಗಳಲ್ಲಿ ಕಸದ ರಾಶಿಗಳು ಹೆಚ್ಚುತ್ತಿವೆ. ಸಾರ್ವಜನಿಕ ಸ್ಥಳಗಳನ್ನು ಕಸದ ತೊಟ್ಟಿಯಂತೆ ಬಳಸುತ್ತಿರುವ ಈ ಪ್ರವೃತ್ತಿ ಪರಿಸರ ಹಾಗೂ ಆರೋಗ್ಯದ ದೃಷ್ಟಿಯಿಂದ ಆತಂಕ ಮೂಡಿಸಿದೆ.
ಯಲ್ಲಾಪುರ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ‘ಕಸಾಸುರ’ರ ಕಾಟ ಹೆಚ್ಚುತ್ತಿದೆ. ಪಟ್ಟಣ ಪಂಚಾಯಿತಿಯ ಕಸ ಸಂಗ್ರಹಣಾ ವಾಹನವು ಪ್ರತಿದಿನ ಮನೆಬಾಗಿಲಿಗೆ ಬಂದು ಕಸವನ್ನು ಸಂಗ್ರಹಿಸಿಕೊಂಡು ಹೋಗುತ್ತಿದ್ದರೂ, ಕೆಲವರು ಕಂಡಕಂಡಲ್ಲಿ ಕಸ ಎಸೆಯುವ ಚಾಳಿಯನ್ನು ಇನ್ನೂ ಬಿಟ್ಟಿಲ್ಲ.
ಪಟ್ಟಣದ ಗಡಿ ಭಾಗಗಳಾದ ಹಲಸ್ಕಂಡ ಕ್ರಾಸ್, ಮಾಗೋಡು ಕ್ರಾಸ್ ಹಾಗೂ ಬಿಸಗೋಡ ರಸ್ತೆ ಅಂಚಿನಲ್ಲಿ ಪ್ರತಿದಿನ ಕಸದ ರಾಶಿಗಳು ಕಂಡುಬರುತ್ತಿವೆ. ಸಂಜೆ ಕತ್ತಲು ಆವರಿಸುತ್ತಿದ್ದಂತೆ ಕೆಲವರು ತಮ್ಮ ವಾಹನಗಳಲ್ಲಿ ಕಸ ತಂದು ಇಂತಹ ಪ್ರದೇಶಗಳಲ್ಲಿ ಸುರಿದು ಹೋಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆಬದಿ ಎಸೆಯಲ್ಪಟ್ಟ ಕಸವನ್ನು ಬೀಡಾಡಿ ಹಂದಿಗಳು ಕೆದಕಿ ಚೆಲ್ಲಾಪಿಲ್ಲಿ ಮಾಡುತ್ತಿವೆ. ಇದರಿಂದ ಸುತ್ತಮುತ್ತ ದುರ್ವಾಸನೆ ವ್ಯಾಪಿಸುತ್ತಿದ್ದು, ಸಂಚಾರಕ್ಕೂ ತೊಂದರೆ ಉಂಟಾಗುತ್ತಿದೆ.
ಆಹಾರದ ಹುಡುಕಾಟದಲ್ಲಿ ಬೀದಿ ಜಾನುವಾರುಗಳು ಪ್ಲಾಸ್ಟಿಕ್, ರಟ್ಟಿನ ಪೆಟ್ಟಿಗೆಗಳು ಸೇರಿದಂತೆ ಅಪಾಯಕಾರಿ ತ್ಯಾಜ್ಯಗಳನ್ನು ತಿನ್ನುತ್ತಿರುವ ದೃಶ್ಯವೂ ಸಾಮಾನ್ಯವಾಗಿದೆ. ಇದರಿಂದ ಪರಿಸರ ಮಾಲಿನ್ಯ ಮಾತ್ರವಲ್ಲ, ಪ್ರಾಣಿಗಳ ಆರೋಗ್ಯಕ್ಕೂ ಗಂಭೀರ ಅಪಾಯ ಉಂಟಾಗುತ್ತಿದೆ.
ಶಾಲಾ ಮಕ್ಕಳು, ಮಹಿಳೆಯರು ಹಾಗೂ ಸಾರ್ವಜನಿಕರು ಪ್ರತಿದಿನ ಸಂಚರಿಸುವ ರಸ್ತೆ ಬದಿಗಳಲ್ಲೇ ಕಸದ ರಾಶಿಗಳು ಬೀಳುತ್ತಿರುವುದು ಪಟ್ಟಣದ ಸೌಂದರ್ಯಕ್ಕೆ ಧಕ್ಕೆ ತರುತ್ತಿದೆ. ಹೊರ ಊರಿನಿಂದ ಬರುವವರಿಗೆ ಯಲ್ಲಾಪುರದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತಾಗಿದೆ. ಸ್ವಚ್ಛ ಪಟ್ಟಣ ಎಂಬ ಹೆಗ್ಗಳಿಕೆಗೆ ಇದು ಕಪ್ಪು ಚುಕ್ಕೆ ಆಗುತ್ತಿದೆ.
ಸಾಕಷ್ಟು ಜಾಗೃತಿ ಮೂಡಿಸಿದರೂ ಕೆಲ ಅಕ್ಷರಸ್ಥ ಅವಿವೇಕಿಗಳು ಇಂತಹ ಕೃತ್ಯಗಳನ್ನು ಮುಂದುವರಿಸಿರುವುದು ವಿಷಾದನೀಯ. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ತಕ್ಷಣ ಎಚ್ಚೆತ್ತುಕೊಂಡು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸಿ, ಕಸ ಎಸೆಯುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕಾಗಿದೆ. ಜೊತೆಗೆ ಸಾರ್ವಜನಿಕರಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಕಾರ್ಯಕ್ಕೂ ಮುಂದಾಗಬೇಕು.
ಅದೇ ರೀತಿ ಪೊಲೀಸ್ ಇಲಾಖೆಯ ಗಸ್ತು ಸಿಬ್ಬಂದಿಯೂ ಈ ಬಗ್ಗೆ ವಿಶೇಷ ಗಮನ ಹರಿಸಿದರೆ ಯಲ್ಲಾಪುರ ಪಟ್ಟಣವನ್ನು ಇನ್ನಷ್ಟು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರವಾಗಿಡಲು ಸಾಧ್ಯವಾಗಲಿದೆ. ಸಾರ್ವಜನಿಕರೂ ತಮ್ಮ ಜವಾಬ್ದಾರಿಯನ್ನು ಅರಿತು ಕಸವನ್ನು ನಿಗದಿತ ಸ್ಥಳದಲ್ಲೇ ವಿಲೇವಾರಿ ಮಾಡುವ ಮೂಲಕ ಪಟ್ಟಣದ ಗೌರವ ಕಾಪಾಡಬೇಕಾಗಿದೆ.