Friday, July 24, 2026
Join WhatsApp Group
HomeLocal Newsಪಂಚಾಯತ್ ರಾಜ್ ಕುಟುಂಬದ ಪರಿಶ್ರಮ ಅಭಿನಂದನಾರ್ಹ

ಪಂಚಾಯತ್ ರಾಜ್ ಕುಟುಂಬದ ಪರಿಶ್ರಮ ಅಭಿನಂದನಾರ್ಹ

ಯಲ್ಲಾಪುರ: ಗ್ರಾಮ ಪಂಚಾಯತ್ ಮಟ್ಟದಲ್ಲಿ ತೆರಿಗೆ ವಸೂಲಾತಿ, ಮಹಾತ್ಮ ಗಾಂಧಿ ನರೇಗಾ ಯೋಜನೆ, ಎಸ್.ಬಿ.ಎಮ್, ವಸತಿ ಹಾಗೂ ಎನ್.ಆರ್.ಎಲ್.ಎಮ್ ಸೇರಿದಂತೆ ಎಲ್ಲ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಪಂಚಾಯತ್ ರಾಜ್ ಕುಟುಂಬದ ಪರಿಶ್ರಮ ಅಭಿನಂದನಾರ್ಹ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಧನವಾಡಕರ್ ಹೇಳಿದರು.

ಅವರು ಶುಕ್ರವಾರ ಯಲ್ಲಾಪುರ ತಾ.ಪಂ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ, ಯಲ್ಲಾಪುರ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಾಮುಖ್ಯತೆ, ಜಾರಿಗೆ ಬಂದ ಇತಿಹಾಸವನ್ನು ವಿವರಿಸಿ, ಎಲ್ಲ ಇಲಾಖೆಯೊಂದಿಗೆ ಪರಸ್ಪರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿಯೂ ಇದೇ ರೀತಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಪಂಚಾಯತ್ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಪ್ರಭಾಕರ್ ಭಟ್ ಮಾತನಾಡಿ, ಕೆಲಸದ ಮಧ್ಯೆ ಒತ್ತಡ ಸಹಜ. ಒತ್ತಡಕ್ಕೆ ಒಳಗಾಗದೆ ಕೆಲಸ ಮಾಡಿದರೆ ಆರೋಗ್ಯಯುತವಾಗಿ ನಿವೃತ್ತರಾಗಬಹುದು. ಸೌಹಾರ್ದಯುತವಾಗಿ ಕರ್ತವ್ಯ ನಿರ್ವಹಿಸೋಣ ಎಂದರು.

ಇದೇ ವೇಳೆ ಗ್ರಾಮ ಪಂಚಾಯತ್ ಮಟ್ಟದ ಕರ ಸಂಗ್ರಹದಲ್ಲಿ ಶೇ. 100ರಷ್ಟು ತೆರಿಗೆ ವಸೂಲಾತಿ ಮಾಡಿ ಸಾಧನೆ ಮಾಡಿದ ಎಲ್ಲ ಗ್ರಾಮ ಪಂಚಾಯಿತಿಗಳ ಪಿಡಿಒ, ಕಾರ್ಯದರ್ಶಿ ಮತ್ತು ಕರ ಸಂಗ್ರಹಗಾರರಿಗೆ ಹಾಗೂ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2025-26ನೇ ಸಾಲಿನಲ್ಲಿ ಶೇ. 100 ಗುರಿ ಸಾಧನೆ ಮಾಡಿದ ಗ್ರಾಮ ಪಂಚಾಯತ್ ಪಿಡಿಒ, ಕಾರ್ಯದರ್ಶಿ, ತಾಂತ್ರಿಕ ಸಹಾಯಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ಅಶೋಕ ಬಂಟ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂಜೀವ ಕುಮಾರ ಹೊಸ್ಕೇರಿ, ಯೋಜನಾ ಅಧಿಕಾರಿ ರಾಘವ, ಸಹಾಯಕ ನಿರ್ದೇಶಕ (ಗ್ರಾಉ) ಮಂಜುನಾಥ ಆಗೇರ್, ಜಿಲ್ಲಾ ಸಂಘಟನೆಯ ಜಂಟಿ ಕಾರ್ಯದರ್ಶಿ ಶಿವಕುಮಾರ್, ಸಹಾಯಕ ಲೆಕ್ಕಾಧಿಕಾರಿ ಮೋಹನ್, ಎಲ್ಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ತಾಲೂಕು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share