ಹಳಿಯಾಳ: ತಾಲೂಕಿನ ಬೆಳವಟಗಿ ಗ್ರಾಮದ ತೋಟದಲ್ಲಿ ಮಾವಿನ ಹಣ್ಣು ಕೀಳಲು ಹೋಗಿದ್ದ ವೇಳೆ ಸಿಡಿಲು ಬಡಿದು 60 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಅಳ್ನಾವರ ತಾಲೂಕಿನ ಕೊಗಿಲಗೇರಿ ನಿವಾಸಿ ಶಿವಾನಂದ ತಂದೆ ರುದ್ರಪ್ಪ ಅಂಗಡಿ (60) ಎಂದು ಗುರುತಿಸಲಾಗಿದೆ. ಅವರು ಮಾವಿನ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು.
ಶನಿವಾರ ಸಂಜೆ ಸುಮಾರು 4.30 ಗಂಟೆ ಸುಮಾರಿಗೆ ಬೆಳವಟಗಿ ಗ್ರಾಮದ ಮಹಾಬಲೇಶ್ವರ ಶಂಭಾಜಿ ಮಂಗನಗೌಡ್ರು ಅವರ ತೋಟದಲ್ಲಿ ಮಾವಿನ ಹಣ್ಣುಗಳನ್ನು ಕೀಳುವ ವೇಳೆ ಏಕಾಏಕಿ ಗುಡುಗು-ಸಿಡಿಲಿನೊಂದಿಗೆ ಆಲಿಕಲ್ಲು ಮಳೆ ಆರಂಭವಾಗಿದೆ. ಇದೇ ವೇಳೆ ಶಿವಾನಂದ ಅವರ ಮೇಲೆ ಸಿಡಿಲು ಬಡಿದ ಪರಿಣಾಮ ಅವರು ನೆಲಕ್ಕುರುಳಿದ್ದಾರೆ.
ತಕ್ಷಣ ಅವರನ್ನು ಖಾಸಗಿ ವಾಹನದಲ್ಲಿ ಹಳಿಯಾಳ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಪರೀಕ್ಷಿಸಿ ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತರ ಪುತ್ರ ಗಂಗಾಧರ ಶಿವಾನಂದ ಅಂಗಡಿ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮರಣದಲ್ಲಿ ಯಾವುದೇ ಅನುಮಾನ ಇಲ್ಲ ಎಂದು ತಿಳಿಸಿದ್ದಾರೆ.
ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.