Friday, July 24, 2026
Join WhatsApp Group
HomeCrimeಹಣ ದ್ವಿಗುಣ; ನಂಬಿದವರಿಗೆ ಉಂಡೆ ನಾಮ!

ಹಣ ದ್ವಿಗುಣ; ನಂಬಿದವರಿಗೆ ಉಂಡೆ ನಾಮ!

‘ಕ್ರಿಸ್ಟಲ್ AI ರೋಬೋಟ್ ಟ್ರೇಡಿಂಗ್’ ಹೆಸರಲ್ಲಿ ಭಾರೀ ವಂಚನೆ

ಬೆಂಗಳೂರು: ನಕಲಿ ಹೂಡಿಕೆ ವೇದಿಕೆಯ ಮೂಲಕ ಜನರನ್ನು ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಭಾರೀ ಹಗರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಈ ವಂಚನಾ ಜಾಲದ ಪ್ರಮುಖ ರೂವಾರಿ ಎಂದು ಗುರುತಿಸಲ್ಪಟ್ಟಿರುವ ರಾಜೇಶ್ ಕಾಮತ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೂಲದವನು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಮಧು ಹಾಗೂ ನಾಗೇಶಪ್ಪ ಎಂಬವರು ಸಹ ಆರೋಪಿಗಳಾಗಿದ್ದಾರೆ.

ಆರೋಪಿಗಳು ‘ಕ್ರಿಸ್ಟಲ್ AI ರೋಬೋಟ್ ಟ್ರೇಡಿಂಗ್’ ಎಂಬ ನಕಲಿ ಹೂಡಿಕೆ ವೇದಿಕೆಯನ್ನು ಸ್ಥಾಪಿಸಿ, ಕೇವಲ 200 ದಿನಗಳಲ್ಲಿ ಹೂಡಿಕೆ ಮಾಡಿದ ಹಣ ದ್ವಿಗುಣಗೊಳ್ಳುತ್ತದೆ ಎಂಬ ಆಮಿಷ ಒಡ್ಡಿ ಸಾವಿರಾರು ಮಂದಿಯನ್ನು ಬಲೆಗೆ ಸೆಳೆದಿದ್ದಾರೆ. ಆರಂಭದಲ್ಲಿ ಕೆಲವರಿಗೆ ಸಣ್ಣ ಪ್ರಮಾಣದ ಲಾಭ ನೀಡಿ ವಿಶ್ವಾಸ ಗಳಿಸಿ, ಬಳಿಕ ದೊಡ್ಡ ಮೊತ್ತದ ಹೂಡಿಕೆಗಳನ್ನು ಪಡೆದು ಸಂಪರ್ಕ ಕಡಿತಗೊಳಿಸಿ ಕಣ್ಮರೆಯಾಗುತ್ತಿದ್ದರು.

ಈ ವಂಚನಾ ಜಾಲ ಕಳೆದ ಎರಡು-ಮೂರು ವರ್ಷಗಳಿಂದ ಸಕ್ರಿಯವಾಗಿದ್ದು, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಕರ್ನಾಟಕದ ಜನರೇ ಪ್ರಮುಖವಾಗಿ ಮೋಸಕ್ಕೊಳಗಾಗಿದ್ದಾರೆ. ದುಬೈ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನೂ ಈ ಜಾಲ ತನ್ನ ಬಲೆಗೆ ಸೆಳೆದಿದೆ.

ಸಾಮಾಜಿಕ ಜಾಲತಾಣಗಳು ಹಾಗೂ ವೈಯಕ್ತಿಕ ಸಂಪರ್ಕಗಳ ಮೂಲಕ ಹೂಡಿಕೆದಾರರನ್ನು ಸೆಳೆದು, 50ಕ್ಕೂ ಹೆಚ್ಚು ಏಜೆಂಟರ ಮೂಲಕ ಜಾಲವನ್ನು ವಿಸ್ತರಿಸಲಾಗಿದೆ. ದುಬೈನಲ್ಲಿ ಕಚೇರಿ ಇದೆ, ಇದು ನೆಟ್ವರ್ಕ್ ಮಾರ್ಕೆಟಿಂಗ್ ಆಧಾರಿತ ವ್ಯವಹಾರ ಎಂದು ಸುಳ್ಳು ಹೇಳಿ ನಂಬಿಕೆ ಮೂಡಿಸಲಾಗಿದೆ. ಆರಂಭದಲ್ಲಿ ಬೆಂಗಳೂರಿನ ಕೆಂಗೇರಿ ರೈಲು ನಿಲ್ದಾಣದ ಬಳಿ ಕಚೇರಿ ತೆರೆದು ಕಾರ್ಯಾಚರಣೆ ನಡೆಸಲಾಗುತ್ತಿತ್ತು ಎನ್ನಲಾಗಿದೆ.

ರಾಜೇಶ್ ಕಾಮತ್ ಕಳೆದ 15 ವರ್ಷಗಳಿಂದ ಹಲವು ನೆಟ್ವರ್ಕ್ ಮಾರ್ಕೆಟಿಂಗ್ ಜಾಲಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ಕಡಿಮೆ ಅವಧಿಯಲ್ಲಿ ಹಣ ದ್ವಿಗುಣಗೊಳಿಸುವ ಭರವಸೆ, ನಕಲಿ ಯೋಜನೆಗಳು ಹಾಗೂ ಮಾತಿನ ಚಾತುರ್ಯದಿಂದ ಹೂಡಿಕೆದಾರರನ್ನು ಸೆಳೆದು ಮೋಸ ಮಾಡುತ್ತಿದ್ದ ಎನ್ನಲಾಗಿದೆ.

ಹಗರಣ ಬಯಲಾದ ನಂತರ ಬೆಂಗಳೂರು ನಗರ ಅಪರಾಧ ವಿಭಾಗ (CCB) ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ರಾಜೇಶ್ ಕಾಮತ್ ಸೇರಿದಂತೆ ಪ್ರಮುಖ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಹಣದ ಜಾಡು ಪತ್ತೆ, ಇತರ ಆರೋಪಿಗಳ ಗುರುತು ಹಾಗೂ ಹಗರಣದ ಸಂಪೂರ್ಣ ವ್ಯಾಪ್ತಿ ತಿಳಿಯಲು ತನಿಖೆ ಮುಂದುವರಿದಿದೆ.


ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಲಾಭದ ಭರವಸೆ ನೀಡುವ ಯಾವುದೇ ಹೂಡಿಕೆ ಯೋಜನೆಗಳನ್ನು ನಂಬುವ ಮೊದಲು ಅಧಿಕೃತ ದಾಖಲೆಗಳು, ಅನುಮತಿ ಹಾಗೂ ಕಾನೂನು ಮಾನ್ಯತೆಗಳನ್ನು ಪರಿಶೀಲಿಸಿ. “ಹಣ ದ್ವಿಗುಣ” ಎಂಬ ಮಾತು ಬಹುಪಾಲು ವಂಚನೆಯ ಬಲೆ ಆಗಿರಬಹುದು.

ಜಾಗರೂಕರಾಗಿರಿ, ನಿಮ್ಮ ಪರಿಶ್ರಮದ ಹಣವನ್ನು ಸುರಕ್ಷಿತವಾಗಿರಿಸಿ. ವಂಚನೆಗೆ ಒಳಗಾದರೆ ತಕ್ಷಣ ಸೈಬರ್ ಕ್ರೈಂ ಸಹಾಯವಾಣಿ 1930ಕ್ಕೆ ಕರೆ ಮಾಡಿ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share