Friday, July 24, 2026
Join WhatsApp Group
HomeLocal Newsತಾಯಿ-ಮಗುವಿನ ಸುರಕ್ಷತೆಗೆ ಆದ್ಯತೆ ನೀಡಿ: ಡಿಸಿ

ತಾಯಿ-ಮಗುವಿನ ಸುರಕ್ಷತೆಗೆ ಆದ್ಯತೆ ನೀಡಿ: ಡಿಸಿ

ಕಾರವಾರ: ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯರನ್ನು ಪ್ರಸವ ಪೂರ್ವ ಆರೈಕೆಗೆ ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಕೊಂಡು, ಅವರಿಗೆ ಸರ್ಕಾರದಿಂದ ನೀಡುವ ಎಲ್ಲಾ ಸವಲತ್ತು ಮತ್ತು ಸೇವೆಗಳನ್ನು ಒದಗಿಸುವ ಮೂಲಕ ತಾಯಿ ಮತ್ತು ಶಿಶು ಮರಣವನ್ನು ತಪ್ಪಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚಿಸಿದರು.

ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗರ್ಭಿಣಿ ಮಹಿಳೆಯರನ್ನು ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಕೊಂಡು ತಾಯಿ ಕಾರ್ಡ್ ವಿತರಿಸುವ ಮೂಲಕ ಗರ್ಭಿಣಿ ಮತ್ತು ಶಿಶುವಿನ ಆರೋಗ್ಯವಂತ ಬೆಳವಣಿಗೆ ಮತ್ತು ಸುರಕ್ಷಿತ ಹೆರಿಗೆಯಾಗುವ ರೀತಿಯಲ್ಲಿ ನಿಯಮಿತವಾಗಿ ತಪಾಸಣೆ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವಂತೆ ಸೂಚಿಸಿದ ಅವರು, ವಿಳಂಬ ನೋಂದಣಿ ಆಗದಂತೆ ಎಚ್ಚರ ವಹಿಸಿ ಎಂದರು.

ಹೆಚ್.ಪಿ.ವಿ ಲಸಿಕೆ ಸೇರಿದಂತೆ ವಿವಿಧ ಲಸಿಕೆಗಳನ್ನು ನೀಡುವ ಕಾರ್ಯಕ್ರಮಗಳಲ್ಲಿ ಶೇ. 100ರಷ್ಟು ಪ್ರಗತಿ ಸಾಧಿಸುವಂತೆ ತಿಳಿಸಿದ ಅವರು, ಸಾಂಕ್ರಾಮಿಕ ರೋಗಗಳು ಮತ್ತು ವಿವಿಧ ರೀತಿಯ ರೋಗಗಳಿಗೆ ನೀಡುವ ಚಿಕಿತ್ಸೆಯ ಕುರಿತಂತೆ ಪರಿಶೀಲನೆ ನಡೆಸಿದರು.

ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಮಾತನಾಡಿ, ಕೆ.ಎಫ್.ಡಿ ಸಂಶಯಾಸ್ಪದ ಪ್ರಕರಣಗಳಲ್ಲಿ 24 ಗಂಟೆಗಳ ಒಳಗೆ ಸ್ಯಾಂಪಲ್ ಕಲೆಕ್ಷನ್ ಮಾಡುವಂತೆ ಮತ್ತು ನಾಯಿ ಕಡಿತ ಮತ್ತು ಹಾವು ಕಡಿತಕ್ಕೆ ಸಂಬಂಧಿಸಿದ ಔಷಧಗಳ ದಾಸ್ತಾನು ಸಾಕಷ್ಟು ಸಂಖ್ಯೆಯಲ್ಲಿ ಇರುವಂತೆ ಎಚ್ಚರಿಕೆ ವಹಿಸಬೇಕು. ವೈದ್ಯಕೀಯ ಶಿಬಿರಗಳನ್ನು ಅಯೋಜಿಸುವ ಮೂಲಕ ರೋಗಿಗಳನ್ನು ಗುರುತಿಸಿ, ಅವರಿಗೆ ಸಕಾಲದಲ್ಲಿ ಚಿಕಿತ್ಸೆಯನ್ನು ಒದಗಿಸಬೆಕು. ಆರೋಗ್ಯ ಕೇಂದ್ರಗಳಲ್ಲಿನ ಮೂಲ ಸೌಕರ್ಯಗಳಲ್ಲಿ ಕೊರತೆಯಿದ್ದರೆ ತಕ್ಷಣ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿಕೊಳ್ಳುವಂತೆ ಮತ್ತು ಮಳೆಗಾಲದ ಆರಂಭಕ್ಕೂ ಮುನ್ನ ಕಟ್ಟಡಗಳ ಅಗತ್ಯ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಂಕರ್ ರಾವ್, ಆರ್.ಸಿ.ಹೆಚ್. ಅಧಿಕಾರಿ ಡಾ. ನಟರಾಜ್ ಹಾಗೂ ಆರೋಗ್ಯ ಇಲಾಖೆಯ ಕಾರ್ಯಕ್ರಮಾಧಿಕಾರಿಗಳು ಮತ್ತು ಎಲ್ಲಾ ತಾಲೂಕುಗಳ ವೈದ್ಯಾಧಿಕಾರಿಗಳು ಇದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share