Friday, July 24, 2026
Join WhatsApp Group
HomeStateಅಬಕಾರಿ ಆಯ 34- ಸಾಮಾಜಿಕ ವ್ಯಯ 51!

ಅಬಕಾರಿ ಆಯ 34- ಸಾಮಾಜಿಕ ವ್ಯಯ 51!

ಕರ್ನಾಟಕ ಅಬಕಾರಿ ಸುಧಾರಣೆ 2026: ಸಾರ್ವಜನಿಕ ಸಮಾಲೋಚನೆಗೆ ಕರಡು ನೀತಿ ಬಿಡುಗಡೆ

ಬೆಂಗಳೂರು: ಕರ್ನಾಟಕ ಸರ್ಕಾರವು “ಕರ್ನಾಟಕ ರಾಜ್ಯ ಅಬಕಾರಿ ಸುಧಾರಣೆಗಳು (2026)” ಎಂಬ ಕರಡು ನೀತಿಯನ್ನು ಸಾರ್ವಜನಿಕ ಸಮಾಲೋಚನೆಗಾಗಿ ಬಿಡುಗಡೆ ಮಾಡಿದೆ. ಜನಕೇಂದ್ರಿತ ಧೋರಣೆಯೊಂದಿಗೆ ರೂಪುಗೊಂಡಿರುವ ಈ ನೀತಿ, ಮದ್ಯ ಸೇವನೆಯಿಂದ ಉಂಟಾಗುವ ಸಾಮಾಜಿಕ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ತೆರಿಗೆ ಮತ್ತು ನಿಯಂತ್ರಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಉದ್ದೇಶಿಸಿದೆ.

ರಾಜ್ಯದಲ್ಲಿ ಮದ್ಯ ಮಾರಾಟದಿಂದ ವಾರ್ಷಿಕವಾಗಿ ಸುಮಾರು 34,600 ಕೋಟಿ ರೂ ಆದಾಯ ಲಭಿಸುತ್ತಿದ್ದರೂ, ಮದ್ಯಪಾನದ ಪರಿಣಾಮವಾಗಿ ರಸ್ತೆ ಅಪಘಾತಗಳು, ಕೌಟುಂಬಿಕ ಹಿಂಸಾಚಾರ, ಯಕೃತ್ ಸಂಬಂಧಿತ ಕಾಯಿಲೆಗಳು ಹಾಗೂ ಕುಟುಂಬದ ಆದಾಯ ನಷ್ಟ ಸೇರಿದಂತೆ ಮದ್ಯ ಸೇವನೆಯಿಂದ ಉಂಟಾಗುವ ಒಟ್ಟಾರೆ ಸಾಮಾಜಿಕ ಹಾನಿ 51,000 ಕೋಟಿಗೂ ಅಧಿಕವಾಗಿದೆ ಎಂದು ಅಂದಾಜಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಶುದ್ಧ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವ ಹೊಸ ವ್ಯವಸ್ಥೆ (ವ್ಯಾಟ್ ಸಹಿತ), ಕ್ಯೂಆರ್ ಕೋಡ್ ಆಧಾರಿತ ಪೂರೈಕೆ ವ್ಯವಸ್ಥೆ, ಡಿಜಿಟಲ್ ಟ್ರ್ಯಾಕ್ & ಟ್ರೇಸ್ ತಂತ್ರಜ್ಞಾನಗಳನ್ನು ಜಾರಿಗೆ ತರಲು ಪ್ರಸ್ತಾಪಿಸಲಾಗಿದೆ. ಪರವಾನಗಿ ಪ್ರಕ್ರಿಯೆಯನ್ನು ಡಿಜಿಟಲ್ ಮೂಲಕ ಸರಳೀಕರಿಸುವುದರ ಜೊತೆಗೆ, ಆರೋಗ್ಯ ಎಚ್ಚರಿಕೆಗಳನ್ನು ಕಡ್ಡಾಯಗೊಳಿಸುವುದು ಮತ್ತು ಚಿಲ್ಲರೆ ವ್ಯಾಪಾರವನ್ನು ಕೋಟಾ ವ್ಯವಸ್ಥೆಯಿಂದ ನೋಂದಣಿ ಆಧಾರಿತ ವ್ಯವಸ್ಥೆಗೆ ಪರಿವರ್ತಿಸುವುದು ಕೂಡ ಒಳಗೊಂಡಿದೆ.

ಶಾಲೆಗಳು ಮತ್ತು ಆಸ್ಪತ್ರೆಗಳ ಸಮೀಪ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸುವುದು ಸೇರಿದಂತೆ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಹಲವು ಕ್ರಮಗಳನ್ನು ನೀತಿಯಲ್ಲಿ ಸೂಚಿಸಲಾಗಿದೆ. ಅಬಕಾರಿ ಆದಾಯದ ಒಂದು ಭಾಗವನ್ನು ಮದ್ಯವರ್ಜನೆ ಸೇವೆಗಳು, ರಸ್ತೆ ಸುರಕ್ಷತೆ, ಕೌಟುಂಬಿಕ ಹಿಂಸಾಚಾರ ತಡೆ ಹಾಗೂ ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಮೀಸಲಿಡುವ ಯೋಜನೆಯೂ ಇದೆ.

ಮುಂದಿನ 6 ವರ್ಷಗಳಲ್ಲಿ ಮದ್ಯ ಸೇವನೆಯ ಪ್ರಮಾಣವನ್ನು ಶೇ. 8–9ಕ್ಕೆ ಇಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಕಡಿಮೆ ಆಲ್ಕೋಹಾಲ್ ಹೊಂದಿರುವ ಮದ್ಯಗಳಿಗೆ ಉತ್ತೇಜನ ನೀಡುವುದು ಹಾಗೂ ಅಕ್ರಮ ವ್ಯಾಪಾರವನ್ನು ನಿಯಂತ್ರಿಸುವುದಕ್ಕೂ ಕ್ರಮ ಕೈಗೊಳ್ಳಲಾಗುತ್ತದೆ.

ನೀತಿಯ ಅನುಷ್ಠಾನಕ್ಕೂ ಮುನ್ನ ಸಾರ್ವಜನಿಕರು, ವ್ಯಾಪಾರಿಗಳು ಮತ್ತು ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಲು ಸರ್ಕಾರ ಅವಕಾಶ ನೀಡಿದೆ. ಆಸಕ್ತರು ಅಧಿಕೃತ ಸಮಾಲೋಚನಾ ಪೋರ್ಟಲ್‌ಗೆ ಭೇಟಿ ನೀಡಿ ಅಥವಾ ವಾಟ್ಸಾಪ್ ಚಾಟ್‌ಬಾಟ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು. ಸಾರ್ವಜನಿಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಅಧಿಕೃತ ಸಮಾಲೋಚನಾ ಪೋರ್ಟಲ್‌ (http://www.civis.vote/consultations/1524/read)ಗೆ ಭೇಟಿ ನೀಡಿ ಅಥವಾ ವಾಟ್ಸಾಪ್‌ ಚಾಟ್‌ಬಾಟ್‌ ಮೂಲಕ ಸಂಪರ್ಕಿಸಿ. ಚಾಟ್‌ಬಾಟ್‌ಗಾಗಿ “karnatakaexcise” ಎಂಬ ಕೀವರ್ಡ್‌ಅನ್ನು https://wa.link/uv7q49 ಲಿಂಕ್‌ಗೆ ಕಳುಹಿಸಬಹುದು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share