Friday, July 24, 2026
Join WhatsApp Group
HomeCrimeಪಾರ್ಸೆಲ್ ಡೆಲಿವರಿ ಹುಡುಗನನ್ನೇ ಯಾಮಾರಿಸಿದ ಗ್ರಾಹಕ!

ಪಾರ್ಸೆಲ್ ಡೆಲಿವರಿ ಹುಡುಗನನ್ನೇ ಯಾಮಾರಿಸಿದ ಗ್ರಾಹಕ!

ಮೊಬೈಲ್ ಬದಲಿಸಿ 1.50 ಲಕ್ಷ ರೂ. ಮೋಸ; ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲು

ಅಂಕೋಲಾ: ಪಾರ್ಸಲ್‌ ಡೆಲಿವರಿ ವೇಳೆ ಗ್ರಾಹಕರ ಹೆಸರಿನಲ್ಲಿ ಕರೆಸಿ, ದುಬಾರಿ ಮೊಬೈಲ್‌ನ್ನು ಡುಪ್ಲಿಕೇಟ್‌ನೊಂದಿಗೆ ಬದಲಿಸಿ ಸುಮಾರು 1.50 ಲಕ್ಷ ರೂ ಮೋಸ ಮಾಡಿದ ಪ್ರಕರಣ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕುಮಟಾ ತಾಲೂಕಿನ ಮಿರ್ಜಾನ್ ನಿವಾಸಿ ಜಿತೇಶ್ (29), ಫ್ಲಿಪ್‌ಕಾರ್ಟ್‌ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಇನ್‌ಸ್ಟಾಕಾರ್ಟ್ ಸರ್ವಿಸಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅವರ ದೂರಿನ ಪ್ರಕಾರ, ಮಾರ್ಚ್ 6ರಂದು ಪೀಲ್ಡ್‌ಎಕ್ಸ್ ಆಪ್ ಮೂಲಕ ಬಂದ ಪಾರ್ಸಲ್‌ಗಳನ್ನು ಡೆಲಿವರಿ ಮಾಡಲು ತೆರಳಿದ ವೇಳೆ ಈ ಘಟನೆ ನಡೆದಿದೆ.

ಪಾರ್ಸಲ್‌ನಲ್ಲಿದ್ದ ವಿಳಾಸಕ್ಕೆ ಕರೆ ಮಾಡಿದಾಗ, ಗ್ರಾಹಕರು ಭಾರತ ಪೆಟ್ರೋಲಿಯಂ ಪಂಪ್ ಹತ್ತಿರ ಬರಲು ಸೂಚಿಸಿದ್ದಾರೆ. ಅಲ್ಲಿಗೆ ಹೋದಾಗ ಇಬ್ಬರು ವ್ಯಕ್ತಿಗಳು ಇದ್ದರು. ಅವರಲ್ಲಿ ಒಬ್ಬ ಪಾರ್ಸಲ್ ಸ್ವೀಕರಿಸುವಂತೆ ನಟನೆ ಮಾಡಿದ್ದಾನೆ. ಅದನ್ನು ಆಪ್‌ನಲ್ಲಿ ಪರಿಶೀಲಿಸಿ ಖಚಿತಪಡಿಸಿಕೊಂಡ ನಂತರ ಡೆಲಿವರಿ ಪ್ರಕ್ರಿಯೆ ಆರಂಭಿಸಲಾಗಿದೆ.

ಈ ವೇಳೆ ಇನ್ನೋಬ್ಬ ವ್ಯಕ್ತಿ ಮಾತುಕತೆ ನಡೆಸುತ್ತಾ ಡೆಲಿವರಿ ಬಾಯ್ ಗಮನ ಬೇರೆಡೆ ಸೆಳೆದಿದ್ದಾನೆ. ಅದನ್ನು ಸದುಪಯೋಗಪಡಿಸಿಕೊಂಡ ಆರೋಪಿ, ಇಶಾನ್ ಎಂಬ ಹೆಸರಿನಲ್ಲಿ ಆರ್ಡರ್ ಮಾಡಿದ್ದ ಆ್ಯಪಲ್ ಐಫೋನ್ 17 ಪ್ರೋ ಮ್ಯಾಕ್ಸ್ (ಸಿಲ್ವರ್, 256GB, ಮೌಲ್ಯ 1,50,120 ರೂ) ಮೊಬೈಲ್‌ನ್ನು ಪರಿಶೀಲಿಸುವಂತೆ ನಟಿಸಿ, ತನ್ನ ಬಳಿ ಇದ್ದ ನಕಲಿ ಮೊಬೈಲ್‌ನೊಂದಿಗೆ ಬದಲಾಯಿಸಿದ್ದಾನೆ.

ನಂತರ ಸಿಮ್ ಟ್ರೇ ತೋರಿಸುವಂತೆ ಹೇಳಿ, ಮೊಬೈಲ್ ಹಾಳಾಗಿದೆ ಎಂದು ಹೇಳಿ ಪಾರ್ಸಲ್‌ಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾನೆ. ಅದರಂತೆ ಆರ್ಡರ್‌ಗಳನ್ನು ಕ್ಯಾನ್ಸಲ್ ಮಾಡಲಾಗಿದ್ದು, ಕಂಪನಿಯಿಂದ ಹಣವನ್ನು ಗ್ರಾಹಕರಿಗೆ ಹಿಂತಿರುಗಿಸಲಾಗಿದೆ.

ಆದರೆ, ವಾಪಸ್ ಸೆಲ್ಲರ್‌ಗೆ ಕಳುಹಿಸಿದ ಮೊಬೈಲ್ ಪರಿಶೀಲಿಸಿದಾಗ, ಅದರ ಐಎಮ್‌ಇಐ ಸಂಖ್ಯೆ ಆರ್ಡರ್ ಮಾಡಿದ ಮೊಬೈಲ್‌ನ ಸಂಖ್ಯೆಯಿಂದ ಭಿನ್ನವಾಗಿರುವುದು ಬೆಳಕಿಗೆ ಬಂದಿದೆ. ಸೆಲ್ಲರ್ ಸಂಸ್ಥೆಯಾದ ಇಂಟರ್ನ್ಯಾಷನಲ್ ವ್ಯಾಲ್ಯೂ ರೀಟೈಲ್ ಪ್ರೈವೇಟ್ ಲಿಮಿಟೆಡ್ ಈ ಬಗ್ಗೆ ಇಮೇಲ್ ಮೂಲಕ ಮಾಹಿತಿ ನೀಡಿದ ನಂತರ ಮೋಸ ನಡೆದಿರುವುದು ದೃಢಪಟ್ಟಿದೆ.

ಸಂಶಯಾಸ್ಪದ ಆರೋಪಿತರಾಗಿ ಇಶಾನ್ ಹಾಗೂ ಇನ್ನೋರ್ವ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಂಕೋಲಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share