Ad
Ad
Ad
Home Crime ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

0
4

ಕುಮಟಾ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ವಿವಿಧ ಕಲಂಗಳಡಿ ದಂಡ ವಿಧಿಸಿ ಕುಮಟಾದ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

ಕುಮಟಾ ಪಟ್ಟಣದ ಹೆಡ್ ಪೋಸ್ಟ್‌ ಆಫೀಸ್‌ ಎದುರು ವಾಸವಿದ್ದ ವಿಶ್ವೇಶ್ವರ ಗಣಪತಿ ಭಟ್ಟ (54) ಅವರನ್ನು ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿರುವ ಆರೋಪದ ಮೇಲೆ 2018ರ ಅಕ್ಟೋಬರ್‌ 17ರಂದು ಕುಮಟಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಕುಮಟಾ ತಾಲೂಕಿನ ಮೆಣಸಿನಕೇರಿ, ಕುಜಳ್ಳಿಯ ಮಂಜುನಾಥ ಈಶ್ವರ ಹೆಗಡೆ, ಶಿರಸಿಯ ಬನವಾಸಿ ರಸ್ತೆಯ ಹರೀಶ ಸುಬ್ರಾಯ ಹೆಗಡೆ ಹಾಗೂ ಶಿವಮೊಗ್ಗ ಜಿಲ್ಲೆಯ ಸೊರಬಾದ ಧನಂಜಯ ಚಂದ್ರಶೇಖರ ನಾಯ್ಕ ಅವರನ್ನು ಬಂಧಿಸಿದ್ದರು.

 ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು.

ಪ್ರಕರಣವು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಸ್‌.ಸಿ. ನಂ.27/2019ರಲ್ಲಿ ಸುದೀರ್ಘ ವಿಚಾರಣೆ ನಡೆದಿದ್ದು, ಸೆಪ್ಟೆಂಬರ್‌ 3, 2026ರಂದು ನ್ಯಾಯಾಧೀಶರು ಮೂವರು ಆರೋಪಿಗಳನ್ನು ವಿವಿಧ ಕಲಂಗಳಡಿ ದೋಷಿಗಳೆಂದು ಪರಿಗಣಿಸಿ ಶಿಕ್ಷೆ ವಿಧಿಸಿದ್ದಾರೆ.

ಕಲಂ 302, 120(ಬಿ), 34 ಐಪಿಸಿ ಅಡಿಯಲ್ಲಿ ಮೂವರಿಗೂ ಜೀವಾವಧಿ ಶಿಕ್ಷೆ ಹಾಗೂ ತಲಾ ₹50,000 ದಂಡ, ಕಲಂ 364 ಅಡಿಯಲ್ಲಿ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ₹30,000 ದಂಡ, ಕಲಂ 201 ಅಡಿಯಲ್ಲಿ 5 ವರ್ಷಗಳ ಸರಳ ಜೈಲು ಶಿಕ್ಷೆ ಹಾಗೂ ತಲಾ ₹40,000 ದಂಡ ವಿಧಿಸಲಾಗಿದೆ.

ಪ್ರಕರಣದ ತನಿಖೆ, ಸಾಕ್ಷಿದಾರರಿಗೆ ಮಾರ್ಗದರ್ಶನ ಹಾಗೂ ನ್ಯಾಯಾಲಯದ ವಿಚಾರಣೆಯ ನಿರಂತರ ಮೇಲ್ವಿಚಾರಣೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್‌ ಇಲಾಖೆ ಅಭಿನಂದಿಸಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ತನುಜಾ ಹೊಸಪಟ್ಟಣ ಅವರು ವಾದ ಮಂಡಿಸಿದ್ದರು.

ಜಿಲ್ಲಾ ಪೊಲೀಸ್‌ ಅಧೀಕ್ಷಕ ದೀಪನ್‌ ಎಂ.ಎನ್., ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಜಿ. ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕ ಮಹೇಶ ಅವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ಮತ್ತು ಕೋರ್ಟ್‌ ಮಾನಿಟರಿಂಗ್‌ ನಡೆಸಲಾಗಿತ್ತು.

NO COMMENTS

LEAVE A REPLY

Please enter your comment!
Please enter your name here

error: Content is protected !!