ಕಾರವಾರ/ಯಲ್ಲಾಪುರ: ಮುಂಬೈ ಪೊಲೀಸರ ಹೆಸರಿನಲ್ಲಿ ‘ಡಿಜಿಟಲ್ ಅರೆಸ್ಟ್’ ಮೂಲಕ ಯಲ್ಲಾಪುರ ತಾಲೂಕಿನ ವೃದ್ಧರೊಬ್ಬರಿಂದ 1.74 ಕೋಟಿ ರೂ ದೋಚಿದ್ದ ಇಬ್ಬರು ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲಾ ಸೈಬರ್ ಅಪರಾಧ (CEN) ಪೊಲೀಸರು ವಿಜಯಪುರದಲ್ಲಿ ಬಂಧಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಉಮ್ಮಚಗಿ ಮೂಲದ 69 ವರ್ಷದ ಎಲ್.ಐ.ಸಿ ಏಜೆಂಟ್ ಹಾಗೂ ಕೃಷಿಕರೊಬ್ಬರಿಗೆ ಏಪ್ರಿಲ್ 21ರಂದು ಅಪರಿಚಿತ ಸಂಖ್ಯೆಯಿಂದ ವಿಡಿಯೋ ಕರೆ ಮಾಡಿ ಮನಿ ಲಾಂಡರಿಂಗ್ ಹೆಸರಿನಲ್ಲಿ ಆರೋಪಿಗಳು ಬೆದರಿಕೆ ಹಾಕಿದ್ದರು. ಈ ಬಗ್ಗೆ ಮುಂಬೈ ಕ್ರೈಂ ಬ್ರಾಂಚ್‌ನಲ್ಲಿ ಎಫ್‌ಐಆರ್ ದಾಖಲಾಗಿದ್ದು, ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಎಂದು ಬೆದರಿಕೆ ಹಾಕಿದ್ದರು.
ಇದರಿಂದ ಭಯಗೊಂಡ ವೃದ್ಧರು, ಏಪ್ರಿಲ್ 21ರಿಂದ 24ರ ಅವಧಿಯಲ್ಲಿ ವಂಚಕರು ನೀಡಿದ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 1,74,50,000 ರೂ ಹಣ ವರ್ಗಾಯಿಸಿ ಮೋಸ ಹೋಗಿದ್ದರು. ಬಳಿಕ ಏಪ್ರಿಲ್ 28ರಂದು ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು.
ಪ್ರಕರಣದ ಜಾಡು ಹಿಡಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ, ಸಿಇಎನ್ ಡಿವೈಎಸ್‌ಪಿ ಬಿ. ಅಶ್ವಿನಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು. ತಂಡವು ಕಾರ್ಯಾಚರಣೆ ನಡೆಸಿ, ಮೇ 1ರಂದು ವಿಜಯಪುರ ಮೂಲದ ಇಬ್ಬರನ್ನು ಬಂಧಿಸಿ ಕಾರವಾರಕ್ಕೆ ಕರೆತಂದಿದೆ. ಬಂಧಿತ ಆರೋಪಿಗಳ ವಿರುದ್ಧ ದೇಶಾದ್ಯಂತ ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್ ಸಂಬಂಧಿಸಿದ ಹಲವು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಈ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಬಿ. ಅಶ್ವಿನಿ, ದಾಂಡೇಲಿ ಪಿಎಸ್‌ಐ ಕಿರಣ ಪಾಟೀಲ್, ಕಾರವಾರ ಟೆಕ್ನಿಕಲ್ ಸೆಲ್ ಸಿಬ್ಬಂದಿಗಳಾದ ಉದಯ ಗುನಗಾ, ಬಬನ್ ಕದಂ ಹಾಗೂ ಸೈಬರ್ ಅಪರಾಧ ಮತ್ತು ದಾಂಡೇಲಿ ಠಾಣೆಯ ಇತರ ಸಿಬ್ಬಂದಿ ಪಾಲ್ಗೊಂಡಿದ್ದರು. ಇವರ ಕಾರ್ಯವನ್ನು ಎಸ್ಪಿ ದೀಪನ್ ಎಂ.ಎನ್. ಅಭಿನಂದಿಸಿದ್ದಾರೆ.