ನೂರಾರು ಗ್ರಾಮಸ್ಥರಿಂದ ಆಕ್ರೋಶ
ಕುಮಟಾ: ತಾಲೂಕಿನ ಮೂರೂರು ಗ್ರಾಮದಲ್ಲಿ ಅರಣ್ಯ ಭೂಮಿ ಮತ್ತು ದೈವಸ್ಥಾನದ ಜಾಗವನ್ನು ಒತ್ತುವರಿ ಮಾಡಲು ಯತ್ನಿಸಿದ ಆರೋಪದ ಮೇಲೆ ಕುಮಟಾ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಿ.ಐ. ಹೆಗಡೆ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಮಾರು 500ಕ್ಕೂ ಹೆಚ್ಚು ಗ್ರಾಮಸ್ಥರು ಒಗ್ಗೂಡಿ ಈ ಭೂ ಅತಿಕ್ರಮಣ ಯತ್ನವನ್ನು ತಡೆದಿದ್ದು, ರಾಜಕೀಯ ಪ್ರಭಾವಕ್ಕೆ ಮಣಿಯದಂತೆ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮೂರೂರು ಗ್ರಾಮದ ಸರ್ವೆ ನಂಬರ್ 191ರಲ್ಲಿರುವ ಸುಮಾರು 3 ಎಕರೆ ಅರಣ್ಯ ಪ್ರದೇಶವನ್ನು ಜಿ.ಐ. ಹೆಗಡೆ ಅವರು ಕಾನೂನುಬಾಹಿರವಾಗಿ ವಶಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಪ್ರಮುಖ ಆರೋಪ.
ಈ ಪ್ರದೇಶದಲ್ಲಿ ಗ್ರಾಮದ 700ಕ್ಕೂ ಹೆಚ್ಚು ಕುಟುಂಬಗಳು ನಂಬುವ ಶ್ರದ್ಧಾಕೇಂದ್ರವಾದ ‘ಜಟಕ ದೇವರು’ ನೆಲೆಸಿದ್ದು, ಇದು ಸಂಪೂರ್ಣವಾಗಿ ಅರಣ್ಯ ಇಲಾಖೆಗೆ ಸೇರಿದ ಜಾಗವಾಗಿದೆ.
ಒಪ್ಪಂದದ ಸಂಚು?
ಖಾಸಗಿ ವ್ಯಕ್ತಿಯೊಬ್ಬರು ಹೊಂದಿರುವ 3 ಎಕರೆ ಇಳಿಜಾರು ಪ್ರದೇಶದ ಬದಲಾಗಿ, ಅರಣ್ಯ ಇಲಾಖೆಯ ಸುಂದರವಾದ, ಸಮತಟ್ಟಾದ ಜಾಗವನ್ನು ಅಕ್ರಮವಾಗಿ ಕೊಡಿಸುವುದಾಗಿ ಜಿ.ಐ. ಹೆಗಡೆ ಅವರು ಮೂಲ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಈಗ ಸಾರ್ವಜನಿಕವಾಗಿ ಕೇಳಿಬರುತ್ತಿದೆ.
ದಾಖಲೆಗಳು ಏನು ಹೇಳುತ್ತವೆ?
ಈ ಜಾಗದ ಕುರಿತು ಈಗಾಗಲೇ ಸ್ಪಷ್ಟನೆ ಸಿಕ್ಕಿದೆ. 2021ರಲ್ಲಿ ಅರಣ್ಯ ಇಲಾಖೆ ಮತ್ತು ತಹಸೀಲ್ದಾರರು ಸ್ಥಳ ಪರಿಶೀಲನೆ ನಡೆಸಿದ್ದರು. ಸದರಿ ಜಾಗವು ಕಂದಾಯ ಇಲಾಖೆಗೆ ಸೇರಿದ್ದಲ್ಲ, ಬದಲಾಗಿ ಅರಣ್ಯ ಇಲಾಖೆಗೆ ಸೇರಿದ್ದೆಂದು ಲಿಖಿತವಾಗಿ ದಾಖಲೆ ನೀಡಲಾಗಿದೆ.
ಹೀಗಿದ್ದರೂ, ರಾಜಕೀಯ ಒತ್ತಡ ಬಳಸಿ ಸರ್ವೆ ಕಾರ್ಯ ಮತ್ತು ಗಡಿ ಗುರುತಿಸುವಿಕೆ ಮಾಡುವ ಮೂಲಕ ಭೂಮಿಯನ್ನು ಕಬಳಿಸಲು ನಿರಂತರ ಸಂಚು ನಡೆಯುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸ್ಥಳದಲ್ಲಿ ಪ್ರತಿಭಟನೆ:
ಕೆಲವು ದಿನಗಳ ಹಿಂದೆ ಅತಿಕ್ರಮಣ ಚಟುವಟಿಕೆಗಳು ನಡೆಯುತ್ತಿದ್ದ ವಿಷಯ ತಿಳಿದ ತಕ್ಷಣ, 200ಕ್ಕೂ ಹೆಚ್ಚು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಜಿ.ಐ. ಹೆಗಡೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮದ ಆಸ್ತಿ ಮತ್ತು ದೈವದ ಜಾಗವನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದ ಗ್ರಾಮಸ್ಥರು, ಸದ್ಯ ಒತ್ತುವರಿ ಕಾರ್ಯವನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮಸ್ಥರ ಆಗ್ರಹ:
“ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಅರಣ್ಯ ಭೂಮಿ ಮತ್ತು ಧಾರ್ಮಿಕ ಸ್ಥಳಗಳನ್ನು ಅತಿಕ್ರಮಿಸುವ ಇಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಒಂದು ವೇಳೆ ರಾಜಕೀಯ ಪ್ರಭಾವ ಬಳಸಿ ಮತ್ತೆ ಅತಿಕ್ರಮಣಕ್ಕೆ ಮುಂದಾದಲ್ಲಿ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ,” ಎಂದು ಮೂರೂರು ಗ್ರಾಮಸ್ಥರು ಎಚ್ಚರಿಸಿದ್ದಾರೆ.