ಅರಣ್ಯವಾಸಿಗಳ ಪರ ಕಾನೂನು ಹೋರಾಟಕ್ಕೆ ನಿರ್ಧಾರ
ಕುಮಟಾ: ರಾಜ್ಯ ಸರ್ಕಾರವು 3 ಎಕರೆಗಿಂತ ಕಡಿಮೆ ಅರಣ್ಯ ಭೂಮಿಯನ್ನು ತೆರವುಗೊಳಿಸದಂತೆ ನೀಡಿದ್ದ ನಿರ್ಬಂಧ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಯಾಗಿ, ಅರಣ್ಯವಾಸಿಗಳ ಪರ ಕಾನೂನಾತ್ಮಕ ಹೋರಾಟ ನಡೆಸಲು ಹೋರಾಟಗಾರರ ವೇದಿಕೆ ನಿರ್ಧರಿಸಿದೆ.
ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಕುಮಟಾ ತಾಲೂಕಿನ ಮಾಸ್ತಿಕಟ್ಟಾ ದೇವಸ್ಥಾನದ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅರಣ್ಯವಾಸಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯ ಸರ್ಕಾರವು ವಾಸ್ತವ್ಯ ಮತ್ತು ಸಾಗುವಳಿ ಭದ್ರತೆ ನೀಡುವ ಉದ್ದೇಶದಿಂದ ಮೂರು ಎಕರೆಗಿಂತ ಕಡಿಮೆ ಅರಣ್ಯ ಭೂಮಿಯಲ್ಲಿರುವ ಒತ್ತುವರಿದಾರರನ್ನು ಮುಂದಿನ ಸೂಚನೆವರೆಗೆ ಒಕ್ಕಲೆಬ್ಬಿಸಬಾರದೆಂದು ಆದೇಶ ಹೊರಡಿಸಿತ್ತು. ಆದರೆ ಈ ಆದೇಶಕ್ಕೆ ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ಜಾರಿಗೆ ತಂದಿರುವುದರಿಂದ ಅದರ ಕಾನೂನುಬದ್ಧತೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಅರಣ್ಯವಾಸಿಗಳ ಹಕ್ಕುಗಳ ರಕ್ಷಣೆಗೆ ಕಾನೂನು ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮುರುಡೇಶ್ವರದಿಂದ ಕಾರವಾರದವರೆಗೆ ಅರಣ್ಯ ಹಕ್ಕು ಕಾಯ್ದೆ ಕುರಿತು ಜಾಗೃತಿ ಮೂಡಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಅಂದಿನ ಸರ್ಕಾರದ ಸಭಾಧ್ಯಕ್ಷರಾಗಿದ್ದ ಕಾಗೋಡ ತಿಮ್ಮಪ್ಪ ಅವರ ಆಸಕ್ತಿಯಿಂದ, ಮೂರು ಎಕರೆ ವ್ಯಾಪ್ತಿಯೊಳಗಿನ ಅರಣ್ಯ ಒತ್ತುದಾರರನ್ನು ಒಕ್ಕಲೆಬ್ಬಿಸಬಾರದೆಂಬ ನಿರ್ಣಯ ವಿಧಾನಸಭೆಯಲ್ಲಿ ಅಂಗೀಕರಿಸಿ, ಸಚಿವ ಸಂಪುಟದ ಉಪಸಮಿತಿ ಶಿಫಾರಸ್ಸಿನ ಮೇರೆಗೆ ಆದೇಶ ಹೊರಡಿಸಲಾಗಿತ್ತು ಎಂದು ತಾಲೂಕು ಅಧ್ಯಕ್ಷ ಮಂಜುನಾಥ ಮರಾಠಿ ನಾಗೂರು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ಮಹೇಶ್ ನಾಯ್ಕ, ಅರಣ್ಯ ಭೂಮಿ ಹಕ್ಕಿಗಾಗಿ ಕಾನೂನಾತ್ಮಕ ಹೋರಾಟ ಅನಿವಾರ್ಯವಾಗಿದ್ದು, ಅರಣ್ಯವಾಸಿಗಳು ಕಾನೂನು ಅರಿವು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ಅರಣ್ಯ ಭೂಮಿಯನ್ನು ಬೇರೆ ಚಟುವಟಿಕೆಗಳಿಗೆ ಬಳಸಬಾರದು ಹಾಗೂ ಅನಧಿಕೃತ ಅತಿಕ್ರಮಣದಾರರನ್ನು ತೆರವುಗೊಳಿಸಲು ವಿಶೇಷ ತಂಡ ರಚಿಸಿ ಕ್ರಮ ಕೈಗೊಳ್ಳಬೇಕೆಂಬ ಸುಪ್ರೀಂ ಕೋರ್ಟ್ ಆದೇಶಗಳ ಹಿನ್ನೆಲೆ, ರಾಜ್ಯದಲ್ಲಿ ಅರಣ್ಯ ಅತಿಕ್ರಮಣದಾರರಲ್ಲಿ ಆತಂಕ ಹೆಚ್ಚಾಗಿದೆ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.