ಹೊನ್ನಾವರ: ಕ್ರಿಕೆಟ್ ಪಂದ್ಯಾವಳಿಯ ವೇಳೆ ಉಂಟಾದ ಜಗಳ ಹಲ್ಲೆಗೆ ತಿರುಗಿದ ಘಟನೆ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ವಲ್ಕಿ ಪ್ರದೇಶದಲ್ಲಿ ನಡೆದಿದೆ.
ಈ ಸಂಬಂಧ ಇಬ್ಬರ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೂರುದಾರರಾದ ವಲ್ಕಿ ನಿವಾಸಿ ಶೇಖ್ ಮಹಮ್ಮದ ಜುಬೇರ ನೀಡಿದ ದೂರಿನ ಪ್ರಕಾರ, ಮೇ 5ರಂದು ಕೊಳಗದ್ದೆ ಶಾಲಾ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಪಂದ್ಯದ ವೇಳೆ ಅಬ್ದುಲ್ ರೆಹಮಾನ್ ಔಟ್ ಆಗಿದ್ದಾನೆ ಎಂದು ಅಂಪೈರ್ ತೀರ್ಪು ನೀಡಿದಾಗ, ಆರೋಪಿತರಾದ ಸುಬಾನ ಖಾಜಾ ಫಕರ್ದಿನ (24) ಮತ್ತು ಮೇಹದಿ ಖಾಜಾ ಫಕರ್ದಿನ (21) ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದೂರುದಾರರು ಜಗಳ ಬೇಡ, ಅಂಪೈರ್ ತೀರ್ಪು ಸರಿ ಇದೆ ಎಂದು ಹೇಳಿದ್ದಕ್ಕೆ ಆರೋಪಿತರು ಕೋಪಗೊಂಡಿದ್ದಾರೆ.
ನಂತರ ಇಬ್ಬರೂ ದೂರುದಾರರ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ಆರೋಪಿತನು ಬ್ಯಾಟ್‌ನಿಂದ ತಲೆಗೆ ಹೊಡೆದು ಗಾಯಪಡಿಸಿದ್ದರೆ, ಮತ್ತೊಬ್ಬನು ಬೆನ್ನಿಗೆ ಹೊಡೆದು ನೋವುಂಟುಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.