Friday, July 24, 2026
Join WhatsApp Group
HomeLocal Newsಆಧ್ಯಾತ್ಮದ ಅನಾವರಣ; ಶ್ರೀ ಕರಿಕಾನ ಪರಮೇಶ್ವರಿ ದೇವಾಲಯ

ಆಧ್ಯಾತ್ಮದ ಅನಾವರಣ; ಶ್ರೀ ಕರಿಕಾನ ಪರಮೇಶ್ವರಿ ದೇವಾಲಯ

‌ಪಶ್ಚಿಮ ಘಟ್ಟಗಳ ಹಸಿರು ಹೊದಿಕೆಯ ನಡುವೆ ಹರಡಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ನೆಲ ಕೇವಲ ಪ್ರಕೃತಿ ಸೌಂದರ್ಯದಷ್ಟೇ ಅಲ್ಲ, ಅನೇಕ ಪುರಾತನ ದೇವಾಲಯಗಳು, ಐತಿಹಾಸಿಕ ಐತಿಹ್ಯಗಳು ಮತ್ತು ಜನನಂಬಿಕೆಗಳ ಆಳವಾದ ಬೇರುಗಳಿಂದ ಪ್ರಸಿದ್ಧವಾಗಿದೆ.

ಸಮುದ್ರ ತೀರದಿಂದ ಬೆಟ್ಟಗಳವರೆಗೆ ಹರಡಿರುವ ಈ ಪ್ರದೇಶದಲ್ಲಿ, ಶತಮಾನಗಳ ಇತಿಹಾಸ ಹೊತ್ತ ದೇವಾಲಯಗಳು ಭಕ್ತಿಭಾವದ ಜೊತೆಗೆ ಸಂಸ್ಕೃತಿಯ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಸಾರುತ್ತಿವೆ. ಅಂತಹ ಅಪರೂಪದ, ಆಧ್ಯಾತ್ಮಿಕ ಮಹತ್ವವುಳ್ಳ ಕ್ಷೇತ್ರಗಳಲ್ಲಿ ಹೊನ್ನಾವರ ತಾಲೂಕಿನ ನೀಲಕೋಡು ಗ್ರಾಮದ ದಟ್ಟ ಅರಣ್ಯದ ಮಧ್ಯದಲ್ಲಿರುವ ‘ಶ್ರೀ ಕರಿಕಾನ ಪರಮೇಶ್ವರಿ’ ದೇವಾಲಯವೂ ಒಂದು.

ಸಮುದ್ರಮಟ್ಟಕ್ಕಿಂತ ಎತ್ತರದಲ್ಲಿರುವ ಬೆಟ್ಟದ ಶಿಖರದ ಮೇಲೆ ನೆಲೆಗೊಂಡಿರುವ ಈ ದೇವಾಲಯ, ಪ್ರಕೃತಿ ಮತ್ತು ಭಕ್ತಿಯ ಅಪೂರ್ವ ಸಂಗಮವಾಗಿದೆ. 1955ರಲ್ಲಿ ವರದಳ್ಳಿಯ ಶ್ರೀ ಶ್ರೀಧರ ಸ್ವಾಮಿಗಳಿಂದ ಪುನರುತ್ಥಾನಗೊಂಡ ಈ ಕ್ಷೇತ್ರವು, ತನ್ನಲ್ಲಿಗೆ ಬರುವ ಭಕ್ತರ ಕೋರಿಕೆಗಳನ್ನು ಈಡೇರಿಸುವ ದೇವಿಯಾಗಿ ಪ್ರಸಿದ್ಧಿ ಪಡೆದಿದೆ.

ಇಲ್ಲಿ ಕುಂಕುಮ, ಬಳೆ, ಸೀರೆ, ಕುಪ್ಪಸಗಳ ಹರಕೆ ಹೊರುವವರ ಸಂಖ್ಯೆ ಅಪಾರ. ವಿಶೇಷವಾಗಿ ಹಳದಿ ಕಾಮಾಲೆ ರೋಗ ನಿವಾರಣೆಗೆ ಅರಿಷಿನ ಮೂಟೆ ಹರಕೆ ಹೊರುವ ಸಂಪ್ರದಾಯ ಇಲ್ಲಿ ವಿಶಿಷ್ಟ ನಂಬಿಕೆಯಾಗಿದ್ದು, ಭಕ್ತರಲ್ಲಿ ಅಪಾರ ವಿಶ್ವಾಸವನ್ನು ಹುಟ್ಟಿಸಿದೆ.

ದೇವಾಲಯದ ಸುತ್ತಮುತ್ತ ಹರಡಿರುವ ಹಸಿರು ಕಾಡು, ದೂರದೂರಕ್ಕೂ ಕಾಣುವ ಬೆಟ್ಟಗಳ ಸಾಲುಗಳು, ಹಾಗೂ ಸಮುದ್ರದ ತೀರದ ನೋಟ ಈ ಕ್ಷೇತ್ರದ ವೈಶಿಷ್ಟ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸುವ ಅನುಭವವೇ ಭಕ್ತರಿಗೆ ಆಧ್ಯಾತ್ಮಿಕ ತೃಪ್ತಿಯ ಜೊತೆಗೆ ಪ್ರಕೃತಿಯ ಅದ್ಭುತವನ್ನು ಮನದಟ್ಟು ಮಾಡಿಸುತ್ತದೆ.

ಕರಿಕಾನಮ್ಮ ದೇವಸ್ಥಾನದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ‘ವಂದಡಿಕೆ’ ಎಂಬ ಪುಟ್ಟ ಶಿವಾಲಯವೂ ಈ ಕ್ಷೇತ್ರದ ಇನ್ನೊಂದು ವಿಶೇಷ ಆಕರ್ಷಣೆ. ಸದಾ ಒಂದೇ ಅಡಿಕೆ ಮರ ಇರುವುದರಿಂದ ‘ಒಂದಡಿಕೆ’ ಎಂಬ ಹೆಸರಿನಿಂದ ಪ್ರಸಿದ್ಧಿಯಾದ ಈ ಸ್ಥಳದಲ್ಲಿ, ನಿರಾವರಣವಾಗಿರುವ ಶಿವಲಿಂಗದ ಮೇಲೆ ಸದಾಕಾಲ ಜಲಧಾರೆ ಸುರಿಯುತ್ತಿರುತ್ತದೆ. ಮೇಲ್ಭಾಗದಲ್ಲಿ ಅಡಿಕೆಯಂತೆ ಚಿಕ್ಕದಾಗಿ ಕಾಣುವ ಈ ಲಿಂಗದ ಬುಡವು ಬ್ರಹ್ಮಾಂಡವನ್ನೇ ಆವರಿಸಿದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.

ಈ ಕ್ಷೇತ್ರದ ಮಹಿಮೆಗಳನ್ನು ವಿವರಿಸುವ ಅನೇಕ ಜನಪದ ಕಥೆಗಳು ಇಂದಿಗೂ ಜೀವಂತವಾಗಿವೆ. ಅವುಗಳಲ್ಲಿ ಪ್ರಮುಖವಾದದ್ದು, ಅರ್ಚಕರ ಗೋವುಗಳ ಘಟನೆ. ಒಂದು ದಿನ ಮೇಯಲು ಹೋದ ಗೋವುಗಳು ಸಂಜೆಯಾದರೂ ಮರಳಿ ಬಾರದಿದ್ದಾಗ, ಕಳವಳಗೊಂಡ ಅರ್ಚಕರು ದೇವಿಯ ಮೊರೆ ಹೊಕ್ಕು ಪ್ರಾರ್ಥನೆ ಮಾಡುತ್ತಾರೆ.

ಸ್ವಲ್ಪ ಸಮಯದಲ್ಲೇ ಗೋವುಗಳು ಮರಳಿ ಬರುತ್ತವೆ. ಆದರೆ ಆ ರಾತ್ರಿ ಗೋವುಗಳನ್ನು ಕಟ್ಟುವಾಗ ತಪ್ಪಾಗಿ ಒಂದು ದೊಡ್ಡ ಹುಲಿಯನ್ನು ಗೋವು ಎಂದುಕೊಂಡು ಕಟ್ಟಿಬಿಡುತ್ತಾರೆ. ಬೆಳಿಗ್ಗೆ ವಿಷಯ ತಿಳಿದು ಭಯಗೊಂಡ ಅರ್ಚಕರು ದೇವಿಯ ತೀರ್ಥ-ಪ್ರಸಾದವನ್ನು ಹುಲಿಯ ಮೇಲೆ ಎರಚಿದಾಗ, ಅದು ವಿಧೇಯವಾಗಿ ಶಾಂತವಾಗುತ್ತದೆ.

ಕೊನೆಗೆ ಹಗ್ಗವನ್ನು ಬಿಚ್ಚುತ್ತಿದ್ದಂತೆಯೇ ದೇವಾಲಯದ ಕಡೆಗೆ ಕ್ಷಣಕಾಲ ನೋಡಿದ ಹುಲಿ ಅರಣ್ಯದಲ್ಲಿ ಮರೆಯಾಗುತ್ತದೆ. ಈ ಘಟನೆ ಬಳಿಕ ದೇವಿಯ ಪರಿವಾರದಲ್ಲಿ ‘ಹುಲಿಯಪ್ಪ’ನಿಗೂ ಸ್ಥಾನ ದೊರೆತು, ದೇವಾಲಯದ ಮುಂದೆ ಅದರ ಮೂರ್ತಿಯನ್ನು ಸ್ಥಾಪಿಸಿ ಪೂಜೆ ಸಲ್ಲಿಸಲಾಗುತ್ತದೆ.

ಇಂತಹ ಪೌರಾಣಿಕ ಮಹಿಮೆ, ಪ್ರಕೃತಿಯ ವೈಭವ ಮತ್ತು ಭಕ್ತಿಯ ಪರಂಪರೆ ಒಂದೇ ಸ್ಥಳದಲ್ಲಿ ಸೇರುವ ಕರಿಕಾನ ಪರಮೇಶ್ವರಿ ಕ್ಷೇತ್ರವು, ಉತ್ತರ ಕನ್ನಡ ಜಿಲ್ಲೆಯ ಆಧ್ಯಾತ್ಮಿಕ ಸಂಪತ್ತಿನ ಒಂದು ಅಮೂಲ್ಯ ರತ್ನ. ಇಲ್ಲಿ ಭೇಟಿ ನೀಡುವ ಪ್ರತಿಯೊಬ್ಬ ಭಕ್ತನಿಗೂ ಇದು ಕೇವಲ ದೇವಾಲಯವಲ್ಲ, ಪ್ರಕೃತಿ ಮತ್ತು ದೈವದ ನಡುವೆ ಇರುವ ಅನನ್ಯ ಅನುಭವದ ತಾಣವಾಗುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ, ಇಲ್ಲಿನ ಪ್ರಕೃತಿ ಸೌಂದರ್ಯ, ಶಾಂತ ವಾತಾವರಣ, ಹೊರಜಗತ್ತಿನ ಗದ್ದಲವಿಲ್ಲದ ಏಕಾಂತ ಪರಿಸರ ಹೊಸ ಅನುಭವ ಮೂಡಿಸುತ್ತದೆ.

– ಸಂಗೀತಾ ಭಟ್.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share