Friday, July 24, 2026
Join WhatsApp Group
HomeLocal Newsಶಾಸಕರ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಕಂಗಾಲು?!

ಶಾಸಕರ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಕಂಗಾಲು?!

ಬನವಾಸಿ ಭಾಗದ ವಿದ್ಯುತ್‌ ಸಮಸ್ಯೆ ಖಂಡಿಸಿ ಬಿಜೆಪಿ ರೈತ ಮೋರ್ಚಾದಿಂದ ಹೆಸ್ಕಾಂ ಕಚೇರಿಗೆ ಮುತ್ತಿಗೆ

ಶಿರಸಿ: ಕಳೆದ ನಾಲ್ಕೈದು ವರ್ಷಗಳಿಂದ ರೈತರು ಕಣ್ಣೀರಿನೊಂದಿಗೇ ಬದುಕುತ್ತಿದ್ದಾರೆ. 24 ಗಂಟೆ ವಿದ್ಯುತ್ ನೀಡುವುದಾಗಿ ಹೇಳಲಾಗುತ್ತಿದೆಯಾದರೂ ವಾಸ್ತವದಲ್ಲಿ ನಿರಂತರ ವ್ಯತ್ಯಯ ಎದುರಾಗುತ್ತಿದೆ. ರೈತರು ಬೆಳೆದ ಅಡಿಕೆ, ಶುಂಠಿ, ಅನಾನಸ್ ಬೆಳೆಗಳು ಒಣಗುತ್ತಿವೆ ಎಂದು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಕಿಡಿಕಾರಿದರು.

ಬನವಾಸಿ ಭಾಗದಲ್ಲಿ ನಿರಂತರವಾಗಿ ಎದುರಾಗುತ್ತಿರುವ ವಿದ್ಯುತ್ ವ್ಯತ್ಯಯ, ಗ್ರಿಡ್ ಕಾರ್ಯಾರಂಭ ವಿಳಂಬ ಹಾಗೂ ಮೂಲಭೂತ ಸೌಕರ್ಯಗಳ ನಿರ್ಲಕ್ಷ್ಯ ಖಂಡಿಸಿ ಬಿಜೆಪಿ ರೈತ ಮೋರ್ಚಾ ಹಾಗೂ ಬನವಾಸಿ ಬಿಜೆಪಿ ಮಂಡಳ ಕಾರ್ಯಕರ್ತರು ಮಂಗಳವಾರ ಶಿರಸಿಯ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಸಿಂಗಲ್‌ ಫೇಸ್‌ನಲ್ಲಿ ಸಮರ್ಪಕ ವೋಲ್ಟೇಜ್ ಕೂಡ ಸಿಗುತ್ತಿಲ್ಲ. ಕಡಿಮೆ ವೋಲ್ಟೇಜ್‌ನಿಂದ ರೈತರ ಪಂಪ್‌ಸೆಟ್‌ಗಳು ಸುಟ್ಟು ಹೋಗುತ್ತಿವೆ. ರಸ್ತೆ, ನೀರಾವರಿ, ಶೀತಲೀಕರಣ ಘಟಕ ಸೇರಿದಂತೆ ಹಲವು ಯೋಜನೆಗಳು ಅರ್ಧಕ್ಕೆ ನಿಂತಿವೆ. ಕಾಮಗಾರಿ ಪೂರ್ಣಗೊಂಡಂತೆ ಹಣ ಪಾವತಿಯಾಗಿದ್ದರೂ ಜನರಿಗೆ ಅದರ ಪ್ರಯೋಜನ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶೇಷವಾಗಿ ಸ್ಥಳೀಯ ಶಾಸಕರ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಕಂಗಾಲಾಗುವಂತಾಗಿದೆ. ಪ್ರತಿಯೊಂದು ಹಳ್ಳಿಯಲ್ಲೂ ಈ ಕುರಿತು ಮಾತನಾಡುತ್ತಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ರೈತರು ದಿನ ದಿನವೂ ಕಷ್ಟ ಪಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಬನವಾಸಿ ಮಂಡಳ ಅಧ್ಯಕ್ಷ ರಮೇಶನ ನಾಯ್ಕ ಕುಪ್ಪಳ್ಳಿ ಮಾತನಾಡಿ, ಬನವಾಸಿ ಭಾಗಕ್ಕೆ ನಿರ್ಮಿಸಲಾದ ವಿದ್ಯುತ್ ಗ್ರಿಡ್‌ಗೆ ಐದು ವರ್ಷ ಕಳೆದರೂ ಕಾರ್ಯಾರಂಭವಾಗಿಲ್ಲ. ಇದರ ಪರಿಣಾಮ ರೈತರು ದಿನನಿತ್ಯ ವಿದ್ಯುತ್ ವ್ಯತ್ಯಯದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೊಳವೆಬಾವಿಗಳಲ್ಲಿ ನೀರಿದ್ದರೂ ವಿದ್ಯುತ್ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಪ್ರತಿಭಟನಾಕಾರರು ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಬನವಾಸಿ ಭಾಗದ ಗ್ರಿಡ್ ಯಾವಾಗ ಕಾರ್ಯಾರಂಭವಾಗುತ್ತದೆ ಎಂಬುದರ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು. ಒಂದು ತಿಂಗಳೊಳಗೆ ಶಿರಸಿ ಅಥವಾ ಎಸಳೆ ಗ್ರಿಡ್ ಮೂಲಕ ಪರ್ಯಾಯ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಮತ್ತಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಳಿಕ ಹೆಸ್ಕಾಂ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ಒಂದು ತಿಂಗಳೊಳಗೆ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ರಾಘವೇಂದ್ರ ನಾಯ್ಕ, ಶಂಕರ ಗೌಡ್ರು ಭಾಶಿ, ಮಂಜುನಾಥ ನಾಯ್ಕ, ಗಣೇಶ ಸಣ್ಣಲಿಂಗಣ್ಣನವರ್, ಚಂದ್ರಶೇಖರ ಗೌಡ ಕಡಗೋಡ, ಸಂತೋಷ ಗೌಡ ಭಾಶಿ, ಶಂಭುಲಿಂಗ ಗೌಡ, ಸಾಯಿನಾಥ ಕುರುಬರ್, ಸುರೇಶ್ ನಾಯ್ಕ ಸೇರಿದಂತೆ ಹಲವು ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share