Friday, July 24, 2026
Join WhatsApp Group
HomeInformationಸೈಬರ್ ಕ್ರೈಂ; ಜಾಣ್ಮೆಯೇ ಅಸ್ತ್ರವಾಗಲಿ

ಸೈಬರ್ ಕ್ರೈಂ; ಜಾಣ್ಮೆಯೇ ಅಸ್ತ್ರವಾಗಲಿ

ಪ್ರತಿನಿತ್ಯ ದೇಶದ, ರಾಜ್ಯದ, ಜಿಲ್ಲೆಯ ಒಂದಿಲ್ಲೊಂದು ಭಾಗದಿಂದ ದಿನಪತ್ರಿಕೆಗಳಲ್ಲಿ ಸುದ್ದಿ ಓದುತ್ತಲೇ ಇರುತ್ತೇವೆ. ಸೈಬರ್ ಕ್ರೈಂ! ಅವರು ಇಷ್ಟು ಲಕ್ಷ ಕಳೆದುಕೊಂಡರು, ಇಲ್ಲಿ ಇಷ್ಟು ಲಕ್ಷ ರೂ ನಾಮ ಬಿತ್ತು, ಮ್ಯಾಟ್ರಮೋನಿ ಸೈಟ್ ನಂಬಿ ದುಡ್ಡು ಕಳೆದುಕೊಂಡರು ಇತ್ಯಾದಿ ಇತ್ಯಾದಿ.

ಇವೆಲ್ಲಾ ಲೆಕ್ಕಗಳನ್ನು ಸೇರಿಸಿದರೆ ಭಾರತದಲ್ಲಿ ಒಂದು ತಿಂಗಳಿಗೆ ನಡೆಯುತ್ತಿರುವ ಸೈಬರ್ ಕ್ರೈಂನ ವಹಿವಾಟು 1 ಸಾವಿರ ಕೋಟಿ ರೂ ಮೀರಿದೆ! ಇವೆಲ್ಲ ದೂರು ದಾಖಲಾದ ಪ್ರಕರಣಗಳ ಲೆಕ್ಕವಾದರೆ, ಠಾಣೆಯ ಮೆಟ್ಟಿಲನ್ನೇರದ ಪ್ರಕರಣವೂ ಇಷ್ಟೇ ಇದ್ದೀತು.

ಭಾರತದಲ್ಲಿ ಸೈಬರ್ ಕ್ರೈಂ ಹೊಸ ಆತಂಕಕಾರಿ ಹಂತಕ್ಕೆ ಕಾಲಿಟ್ಟಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಡಿಜಿಟಲ್ ಅಪರಾಧಗಳು ಪ್ರಸ್ತುತ ಭಾರತೀಯರನ್ನು ಗಂಭೀರ ತೊಂದರೆಗೆ ಸಿಲುಕಿಸುತ್ತಿವೆ.

ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗೆ ನಡೆಸಿದ ವಿಶ್ಲೇಷಣೆಯ ಪ್ರಕಾರ, ಪ್ರತಿ ತಿಂಗಳು ಭಾರತೀಯರು ಸುಮಾರು 1 ಸಾವಿರ ಕೋಟಿ ರೂಪಾಯಿಗಳನ್ನು ಸೈಬರ್ ಮೋಸಕ್ಕೆ ಬಲಿಯಾಗಿ ಕಳೆದುಕೊಳ್ಳುತ್ತಿದ್ದಾರೆ.

ಹೇಗೆಲ್ಲ ಕಳೆಯುತ್ತಿದೆ ಗೊತ್ತೇ?

* ಫೇಕ್ ಇನ್ವೆಸ್ಟ್ಮೆಂಟ್ ಆಫರ್ಗಳು (ನಕಲಿ ಕ್ರಿಪ್ಟೋ ಕರೆನ್ಸಿ /ಶೇರು ಹಣ ಮಾಡುವ ಗ್ಯಾರಂಟಿ).

* ಡೇಟಿಂಗ್ ಆ್ಯಪ್/ಮ್ಯಾಟ್ರಿಮೋನಿಯಲ್ ಮೋಸಗಳು.

* ಸೋಶಿಯಲ್ ಮೀಡಿಯಾಗಳಲ್ಲಿ ನಕಲಿ ಲಿಂಕ್ ಕಳಿಸಿ ಫಿಶಿಂಗ್ ಪ್ರಯತ್ನ.

* ಡೀಪ್ ಫೇಕಿಂಗ್, ಡಿಜಿಟಲ್ ಅರೆಸ್ಟ್ ಮೂಲಕ ವಂಚನೆ.

* ವಿದೇಶಗಳಲ್ಲಿ ಭರ್ಜರಿ ಸಂಬಳದ ಜಾಬ್ ಆಫರ್ಗಳು.

* ವಿವಿಧ ಕಂಪನಿಗಳ ಹೆಸರಲ್ಲಿ ಉಚಿತ ಉಡುಗೊರೆಗಳ ಆಮಿಷ.

* ಬ್ಯಾಂಕ್ ಖಾತೆಗಳ ಇ-ಕೆವೈಸಿ ಮಾಡಿಸುವಂತೆ ಸುಳ್ಳು ಅಪ್ಲಿಕೇಶನ್ಗಳ ಮೂಲಕ.

ಪತ್ತೆ ಅಷ್ಟು ಸುಲಭವಲ್ಲ!

ಇಂತಹ ಸೈಬರ್ ಕ್ರೈಂಗಳಲ್ಲಿ ಪ್ರಕರಣ ದಾಖಲಿಸಿದರೂ ಕಳೆದುಕೊಂಡ ಹಣವನ್ನು ಮರಳಿ ಪಡೆಯುವುದು ಅಷ್ಟು ಸುಲಭವಲ್ಲ. ಯಾಕೆಂದರೆ, ಅಪರಾಧಿಗಳು ಭಾರತ ಬಿಟ್ಟು ಬೇರೆ ದೇಶಗಳಲ್ಲಿಯೂ ಕುಳಿತು ವಂಚಿಸುತ್ತಿರಬಹುದು. ಈ ಮೋಸಗಳ ಮೂಲವಾಗಿರುವ ದೇಶಗಳ ಪಟ್ಟಿಯಲ್ಲಿ ಕಾಂಬೋಡಿಯಾ, ಮ್ಯಾನ್ಮಾರ್, ಲಾವೋಸ್ ಮತ್ತು ವಿಯೆಟ್ನಾಂ ಮುಂತಾದ ದಕ್ಷಿಣ ಪೂರ್ವ ಏಷ್ಯನ್ ರಾಷ್ಟ್ರಗಳು ಮುಖ್ಯವಾಗಿವೆ. ಇಲ್ಲಿಂದ ಅಲ್ಲಿಗೆ ತೆರಳಿ ಅಪರಾಧ ಪತ್ತೆ ಮಾಡಿ, ಹಣ ಮರಳಿ ಪಡೆಯುವುದು ಕಷ್ಟದ ಕೆಲಸ.

ದೊಡ್ಡ ಜಾಲವೇ ಇದೆ

ಈ ದೇಶಗಳಲ್ಲಿ ಸ್ಥಾಪಿತವಾಗಿರುವ ‘ಸೈಬರ್ ಕ್ರೈಂ ಫ್ಯಾಕ್ಟರಿʼಗಳಲ್ಲಿ ಬಲವಂತದಿಂದ ಕೆಲಸ ಮಾಡಲು ಮನುಷ್ಯರನ್ನೇ ಅಪಹರಿಸಿ ಬಳಸಲಾಗುತ್ತಿದೆ. ಇನ್ನಿಲ್ಲದ ಬೆದರಿಕೆಯೊಡ್ಡಿ, ಅವರ ಮೂಲಕಲೇ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ತೆರೆದು ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ತಂತ್ರಾತ್ಮಕ ಮೋಸ ನಡೆಸಲಾಗುತ್ತಿದೆ. ಭಾರತವೂ ಸೇರಿದಂತೆ ವಿವಿಧ ದೇಶಗಳಲ್ಲಿ ದಾಖಲಾದ `ಮಿಸ್ಸಿಂಗ್ ʼ ಪ್ರಕರಣಗಳಿಗೂ, ಈ ಸೈಬರ್ ಕ್ರೈಂಗಳಿಗೂ ಬಿಡಿಸಲಾಗದ ನಂಟೂ ಇದೆ.

ನಾವೇನು ಮಾಡಬಹುದು?

ಸಾರ್ವಜನಿಕರು ಕೆಲವೊಂದು ಮುನ್ನೆಚ್ಚರಿಕೆ ವಹಿಸಿದರೆ ಅಪಾಯದಿಂದ ಪಾರಾಗಬಹುದು.

ಅಪರಿಚಿತ ಸಂಖ್ಯೆಗಳಿಂದ ಬರುವ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ. ವ್ಯಕ್ತಿಗತ ಮಾಹಿತಿ (ಬ್ಯಾಂಕ್, ಓಟಿಪಿ, ಪಾಸ್ವರ್ಡ್) ಯಾರೊಂದಿಗೂ ಹಂಚದಿರಿ. ಹಣ ಹೂಡಿಕೆಗೂ ಮೊದಲು ಆ ಕಂಪನಿಯ ಅಧಿಕೃತ ವೆಬ್ಸೈಟ್ ಪರಿಶೀಲಿಸಿ. ಯಾರೋ ಫೋನ್ ಮಾಡಿ ಹಣ ಕೇಳಿದರೆಂದು ತಕ್ಷಣ ಹಣ ಕಳಿಸಬೇಡಿ. ಸೋಶಿಯಲ್ ಮೀಡಿಯಾಗಳಲ್ಲಿ ಬೇಕಾಬಿಟ್ಟಿಯಾಗಿ ಫೋಟೋ/ವಿಡಿಯೋಗಳನ್ನು ಶೇರ್ ಮಾಡದಿರಿ.

ಡಿಜಿಟಲ್ ಸಾಕ್ಷರರಾಗೋಣ

ಇಂತಹ ಮಾಹಿತಿ-ತಂತ್ರಜ್ಞಾನದ ಯುಗದಲ್ಲಿ ಕ್ಷಣದ ದಡ್ಡತನದಿಂದ ಅಪಾರ ಹಣ ಕಳೆದುಕೊಳ್ಳುತ್ತಿದ್ದೇವೆಂದರೆ, ಅದು ನಮ್ಮ ನಷ್ಟವಷ್ಟೇ ಅಲ್ಲ, ದೇಶದ ನಷ್ಟವೂ ಹೌದು. ನಮ್ಮ ಜಾಣ್ಮೆ ಮತ್ತು ಎಚ್ಚರಿಕೆಯೇ ನಮ್ಮ ಶಸ್ತ್ರವಾಗಬೇಕು. ನಿಯಮಿತವಾಗಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ವಿವರಗಳನ್ನು ಪರೀಕ್ಷಿಸುತ್ತಿರಿ. ಅಪರಿಚಿತ ಸಂಖ್ಯೆಗಳಿಂದ ಬರುವ ಕಾಲ್, ಮೆಸೇಜ್ಗಳನ್ನು ಯೋಚಿಸದೇ ನಂಬಬೇಡಿ, ಲಿಂಕ್ಗಳನ್ನು ತಪ್ಪಿಯೂ ತೆರೆಯಬೇಡಿ. ಜಾಗರೂಕರಾಗಿರಿ, ಜಾಗೃತಿ ಮೂಡಿಸಿ! ಇದು ಕೆನರಾ ನೆಕ್ಸ್ಟ್ ಕಳಕಳಿ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share