Saturday, May 30, 2026
HomeLocal Newsಯಲ್ಲಾಪುರ; ಜಿ+2 ಮನೆ ಹಂಚಿಕೆಯಲ್ಲಿ ಗೋಲ್‌ಮಾಲ್?!‌

ಯಲ್ಲಾಪುರ; ಜಿ+2 ಮನೆ ಹಂಚಿಕೆಯಲ್ಲಿ ಗೋಲ್‌ಮಾಲ್?!‌

ಯಲ್ಲಾಪುರ: ಕೊಳಚೆ ನಿರ್ಮೂಲನಾ ಮಂಡಳಿಯಿಂದ 7 ವರ್ಷಗಳ ಹಿಂದೆ ಪಟ್ಟಣದ ಹೆಬ್ಬಾರ್ ನಗರದಲ್ಲಿ ಜಿ+2 ಮನೆಯ ಹಂಚಿಕೆಗಾಗಿ 350 ಫಲಾನುಭವಿಗಳಿಂದ ತಲಾ 50 ಸಾವಿರ ರೂ ಪಡೆಯಲಾಗಿತ್ತು. ಆದರೆ, ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ, ಮನೆಯೂ ಹಂಚಿಕೆಯಾಗಿಲ್ಲ. ಯೋಜನೆಯ ಹೆಸರಿನಲ್ಲಿ ನಡೆಯುತ್ತಿರುವ ಹಗಲು ದರೋಡೆ ಎಂದು ಬಿಜೆಪಿಯ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ಆರೋಪಿಸಿದರು.

ಶುಕ್ರವಾರ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ತಿಂಗಳುಗಳ ಹಿಂದೆ ಬಿಜೆಪಿ ಈ ಕುರಿತು ಪ್ರತಿಭಟನೆ ನಡೆಸಿದಾಗ ತಹಸೀಲ್ದಾರರು ಕೆಲವೇ ದಿನಗಳಲ್ಲಿ ಮನೆ ಹಂಚಿಕೆ ಮಾಡುವ ಭರವಸೆಯನ್ನೇನೋ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರ ನಡುವೆಯೇ ಕೆಲವರು ಜಿ+2 ಮನೆಗಳ ಫಲಾನುಭವಿಗಳು ಮತ್ತೆ ಕೊಳಚೆ ನಿರ್ಮೂಲನಾ ಮಂಡಳಿಗೆ 50 ಸಾವಿರ ರೂ ಹಾಗೂ ಹೆಬ್ಬಾರ್ ನಗರ ನಿವಾಸಿಗಳ ಒಕ್ಕೂಟಕ್ಕೆ 25 ಸಾವಿರ ರೂ ಸೇರಿ ಒಟ್ಟು 75 ಸಾವಿರ ರೂ ಪಾವತಿಸಬೇಕು. ಹಣ ನೀಡಿದವರಿಗೆ ಮಾತ್ರ ಮನೆ ಹಂಚಿಕೆ ಮಾಡಲಾಗುತ್ತದೆ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯಾವುದೇ ಅಧಿಕೃತ ಹೆಸರು ಅಥವಾ ವಿಳಾಸವಿಲ್ಲದ ಅರ್ಜಿ ನಮೂನೆಗಳನ್ನು ಪಟ್ಟಣದಲ್ಲಿ ಹಂಚಲಾಗುತ್ತಿದ್ದು, ಪಟ್ಟಣ ಪಂಚಾಯಿತಿ ಅಥವಾ ಕೊಳಚೆ ನಿರ್ಮೂಲನಾ ಮಂಡಳಿ ಇದರಲ್ಲಿ ಭಾಗಿಯಾಗಿಲ್ಲ. ಸಂಬಂಧವಿಲ್ಲದ ಕೆಲವರು ಬಡ ಫಲಾನುಭವಿಗಳಿಂದ ಹಣ ವಸೂಲಿ ಮಾಡಿ ಮೋಸ ಮಾಡುವ ದಂಧೆ ಆರಂಭಿಸಿದ್ದಾರೆ ಎಂದು ಆರೋಪಿಸಿದರು.

ಶಾಸಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ಬಡ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡುವ ದಿನಾಂಕವನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಸಚಿವ ಶಿವರಾಮ ಹೆಬ್ಬಾರ್ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಯಲ್ಲಾಪುರಕ್ಕೆ ತಂದಿದ್ದರೂ, ಯಾವುದೇ ಯೋಜನೆ ಸಂಪೂರ್ಣವಾಗಿ ಮುಗಿದಿಲ್ಲ ಎಂದು ಆರೋಪಿಸಿದರು.

24×7 ಕುಡಿಯುವ ನೀರಿನ ಯೋಜನೆ, ಕೆರೆ ತುಂಬಿಸುವ ಯೋಜನೆ, ರಸ್ತೆ ಕಾಮಗಾರಿಗಳು, ಜಿ+2 ಮನೆ ಹಂಚಿಕೆ ಸೇರಿದಂತೆ ಹಲವು ಯೋಜನೆಗಳು ಸರಿಯಾಗಿ ಜಾರಿಯಾಗಿಲ್ಲ. ಪ್ರತಿಪಕ್ಷವಾಗಿ ನಾವು ಪ್ರತಿಭಟನೆ ನಡೆಸಿದರೂ ಅದನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯವಾದಿ ಗಣೇಶ ಪಾಟಣಕರ್ ಮಾತನಾಡಿ, ಜಿ+2 ಮನೆಗಳನ್ನು ನಿರ್ಮಿಸುತ್ತಿರುವ ಹೆಬ್ಬಾರ್ ನಗರದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಪಟ್ಟಣದ ಬೇರೆಡೆ ಬಳಕೆಯಾಗಬೇಕಿದ್ದ ಎಸ್‌ಸಿ-ಎಸ್‌ಟಿ ಅನುದಾನವನ್ನು ಬಳಸಲಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆ.ಟಿ. ಹೆಗಡೆ, ರವಿ ದೇವಾಡಿಗ, ರಜತ ಬದ್ದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಯಲ್ಲಾಪುರದಲ್ಲಿ ʻಕೇಸರಿ ಶಾಲುʼ ಅಭಿಯಾನ

ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ಯಲ್ಲಾಪುರದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆ-ಕಾಲೇಜುಗಳಿಗೆ ಬಂದರೆ, ಹಿಂದೂ ವಿದ್ಯಾರ್ಥಿಗಳಿಗೆ ಬಿಜೆಪಿ ವತಿಯಿಂದ ಕೇಸರಿ ಶಾಲು ವಿತರಿಸುವ ಆಂದೋಲನ ನಡೆಸಲಾಗುವುದು.

– ಪ್ರಸಾದ ಹೆಗಡೆ. – ಬಿಜೆಪಿ ಮಂಡಲಾಧ್ಯಕ್ಷ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Share