Friday, July 24, 2026
Join WhatsApp Group
HomeStateನಟ ದರ್ಶನ್‌ಗಿಲ್ಲ ಸುಪ್ರೀಂ ʻಜಾಮೂ(ಮೀ)ನುʼ

ನಟ ದರ್ಶನ್‌ಗಿಲ್ಲ ಸುಪ್ರೀಂ ʻಜಾಮೂ(ಮೀ)ನುʼ

ನವದೆಹಲಿ/ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ್‌ಗೆ ಸುಪ್ರೀಂಕೋರ್ಟ್‌ನಲ್ಲಿ ಭಾರೀ ಹಿನ್ನಡೆಯಾಗಿದೆ.

ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸದ್ಯಕ್ಕೆ ಜಾಮೀನು ನೀಡಲು ನಿರಾಕರಿಸಿದ್ದು, ನಟ ಇನ್ನೂ ಕೆಲವು ಕಾಲ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ವೇಳೆ ಪ್ರಕರಣದ ವಿಚಾರಣೆ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣದಲ್ಲಿ ಒಟ್ಟು 272 ಸಾಕ್ಷಿಗಳಿದ್ದರೂ ಕಳೆದ ಏಳು ತಿಂಗಳಲ್ಲಿ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿರುವ ಬಗ್ಗೆ ಕೋರ್ಟ್ ಗರಂ ಆಗಿದ್ದು, “ಈ ವೇಗದಲ್ಲಿ ವಿಚಾರಣೆ ನಡೆದರೆ ಪ್ರಕರಣ ಮುಗಿಯಲು ಹಲವು ವರ್ಷಗಳೇ ಬೇಕಾಗುತ್ತವೆ” ಎಂದು ಕಠಿಣವಾಗಿ ಅಭಿಪ್ರಾಯಪಟ್ಟಿದೆ.

ವಿಚಾರಣೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ 2027ರ ಮೇ 15ರೊಳಗೆ ಪ್ರಕರಣದ ಸಂಪೂರ್ಣ ವಿಚಾರಣೆ ಪೂರ್ಣಗೊಳಿಸಬೇಕು ಎಂದು ಖಡಕ್ ಗಡುವು ವಿಧಿಸಿರುವ ನ್ಯಾಯಾಲಯ, ಅಗತ್ಯವಿದ್ದರೆ ಪ್ರತಿದಿನ ವಿಚಾರಣೆ ನಡೆಸುವಂತೆ ಸೂಚನೆ ನೀಡಿದೆ.

ಜಾಮೀನು ನಿರಾಕರಿಸಿದರೂ ದರ್ಶನ್ ಅವರಿಗೆ ಜೈಲಿನಲ್ಲಿ ಇತರೆ ವಿಚಾರಣಾಧೀನ ಕೈದಿಗಳಿಗೆ ದೊರೆಯುವ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಜೈಲು ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. “ಮೂಲ ಸೌಲಭ್ಯ ಕಲ್ಪಿಸುವುದು ಜೈಲು ಆಡಳಿತದ ಕರ್ತವ್ಯ” ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಇನ್ನು ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್‌ನಿಂದ ಸಾಮಾನ್ಯ ಸೆಲ್‌ಗೆ ಸ್ಥಳಾಂತರಿಸುವಂತೆ ಅವರ ಪರ ವಕೀಲರು ಮನವಿ ಮಾಡಿಕೊಂಡಿದ್ದರೂ, ಈ ಕುರಿತು ಸುಪ್ರೀಂಕೋರ್ಟ್ ಯಾವುದೇ ಆದೇಶ ನೀಡಿಲ್ಲ. ಹೀಗಾಗಿ ದರ್ಶನ್ ಸದ್ಯಕ್ಕೆ ಕ್ವಾರಂಟೈನ್ ಸೆಲ್‌ನಲ್ಲೇ ಮುಂದುವರಿಯಬೇಕಾಗಿದೆ.

ಸುಪ್ರೀಂಕೋರ್ಟ್‌ನ ಈ ತೀರ್ಮಾನದಿಂದ ದರ್ಶನ್ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಪ್ರಕರಣದ ವಿಚಾರಣೆ ಮುಂದಿನ ಒಂದು ವರ್ಷಕ್ಕೂ ಹೆಚ್ಚು ಕಾಲ ಮುಂದುವರಿಯುವ ಸಾಧ್ಯತೆ ಎದುರಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share