Saturday, May 30, 2026
HomeLocal Newsಗೃಹಲಕ್ಷ್ಮೀ ಯೋಜನೆ; ಅಕ್ರಮಕ್ಕಿಲ್ಲ ಅವಕಾಶ

ಗೃಹಲಕ್ಷ್ಮೀ ಯೋಜನೆ; ಅಕ್ರಮಕ್ಕಿಲ್ಲ ಅವಕಾಶ

ಮೃತರ ಬ್ಯಾಂಕ್‌ ಖಾತೆಗಳಿಗೆ ಜಮೆಯಾಗಿದ್ದ ಹಣ ವಾಪಸ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ಮೃತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದ್ದ 12.37 ಲಕ್ಷ ರೂ ಹಣವನ್ನು ಸರ್ಕಾರಕ್ಕೆ ಮರುಭರಣ ಮಾಡಲಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ಪಿ. ನಾಯ್ಕ್ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಸಭೆಯಲ್ಲಿ ಮಾತನಾಡಿದ ಅವರು, ಮೃತ ಫಲಾನುಭವಿಗಳ ಖಾತೆಗಳಿಗೆ ಇನ್ನೂ ಹೆಚ್ಚಿನ ಮೊತ್ತ ಜಮೆಯಾಗಿರುವ ಸಾಧ್ಯತೆ ಇರುವುದರಿಂದ, ಅಂತಹ ಪ್ರಕರಣಗಳ ಮಾಹಿತಿ ದೊರೆತ ಕೂಡಲೇ ಗ್ಯಾರಂಟಿ ಸಮಿತಿಯ ಸದಸ್ಯರು ಅಂಗನವಾಡಿ ಕಾರ್ಯಕರ್ತೆಯರು ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮಾಹಿತಿ ನೀಡಿ, ಮುಂದಿನ ಹಣ ಜಮೆಯಾಗುವುದನ್ನು ತಡೆಯಲು ಸಹಕರಿಸಬೇಕು ಎಂದು ಹೇಳಿದರು.

ತಾಂತ್ರಿಕ ಕಾರಣಗಳಿಂದ ಯೋಜನೆ ಹಣ ಸಂದಾಯವಾಗದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಸಹ ನಿರ್ದೇಶನ ನೀಡಿದರು.

ಸಭೆಯಲ್ಲಿ ಹೆಸ್ಕಾಂ ವತಿಯಿಂದ ಜಿಲ್ಲೆಯಲ್ಲಿ ಆಗಾಗ ವಿದ್ಯುತ್ ಕಡಿತವಾಗುತ್ತಿರುವ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ನಿರಂತರ ವಿದ್ಯುತ್ ಪೂರೈಕೆಗಾಗಿ ಅಗತ್ಯ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಹಾಗೂ ವಿದ್ಯುತ್ ತಂತಿಗಳ ಮೇಲಿರುವ ಮರದ ಕೊಂಬೆಗಳು ಮತ್ತು ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಸೂಚಿಸಲಾಯಿತು.

ಯುವನಿಧಿ ಯೋಜನೆ ಫಲಾನುಭವಿಗಳಿಗೆ ಸ್ವಉದ್ಯೋಗ ಆರಂಭಿಸಲು ನೆರವಾಗುವ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಿ, ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಬೇಕು ಎಂದು ಕೌಶಲ್ಯಾಭಿವೃದ್ಧಿ ಇಲಾಖೆಗೆ ಸಲಹೆ ನೀಡಲಾಯಿತು.

ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಹೊಸದಾಗಿ ನೇಮಕಗೊಂಡ ಚಾಲಕರಿಗೆ ಸುರಕ್ಷಿತ ಚಾಲನೆ ಕುರಿತ ಹೆಚ್ಚುವರಿ ತರಬೇತಿ ನೀಡಬೇಕು. ಬಸ್‌ಗಳು ನಿಗದಿತ ನಿಲ್ದಾಣಗಳಲ್ಲೇ ನಿಲ್ಲಿಸಿ ಪ್ರಯಾಣಿಕರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು ಎಂದು ಸೂಚಿಸಲಾಯಿತು.

ಜಿಲ್ಲೆಯ ಎಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಇಲಾಖೆ ಕಚೇರಿಗಳಲ್ಲಿ ಯೋಜನೆಗಳ ಮಾಹಿತಿ ಫಲಕ ಮತ್ತು ಬ್ಯಾನರ್‌ಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ತಲುಪಿಸಬೇಕು ಎಂದರು.

ಗೃಹಲಕ್ಷ್ಮಿ ಯೋಜನೆಯ ಮಾರ್ಚ್ ತಿಂಗಳ ಹಣ ಈಗಾಗಲೇ ಬಿಡುಗಡೆಯಾಗಿದ್ದು, ಇನ್ನೂ ಮೂರು ದಿನಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದರು.

ಸಭೆಯಲ್ಲಿ ನಾಗರಾಜ ಮುರ್ಡೇಶ್ವರ, ಜನಾರ್ಧನ ಕುಪ್ಪದೇವಾಡಿಗ, ರಾಜೇಂದ್ರ ರಾಣೆ ಸೇರಿದಂತೆ ಪ್ರಾಧಿಕಾರದ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share