ಶಿರಸಿ: ನಗರದ ಆನೆಹೊಂಡ ರಸ್ತೆ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟಕಾ ಜುಗಾರಿ ನಡೆಸುತ್ತಿದ್ದ ಆರೋಪದ ಮೇಲೆ ಶಿರಸಿ ನಗರ ಪೊಲೀಸರು ಓರ್ವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ರಾಯರಪೇಟೆಯ ಗಣಪತಿ ಅನಂತ ನಾಯ್ಕ (51) ಬಂಧಿತ ಆರೋಪಿಯಾಗಿದ್ದು, ವಾನಳ್ಳಿಯ ಪ್ರಕಾಶ ಹೆಗಡೆ ಎಂಬಾತ ಬುಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ.
ಮೇ 14ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಆರೋಪಿತನು ಸಾರ್ವಜನಿಕರಿಂದ ಒಂದು ರೂಪಾಯಿಗೆ 80 ರೂಪಾಯಿ ನೀಡುವುದಾಗಿ ಹೇಳಿ ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿಸಿಕೊಂಡು ಮಟಕಾ ಜುಗಾರಿ ನಡೆಸುತ್ತಿದ್ದ ವೇಳೆ ಶಿರಸಿ ನಗರ ಪೊಲೀಸ್ ಠಾಣೆಯ ಪಿಎಸ್ಐ ನರಸಿಂಹಲು ನೇತೃತ್ವದ ತಂಡ ದಾಳಿ ನಡೆಸಿದೆ.
ದಾಳಿಯ ವೇಳೆ 750 ರೂ ನಗದು, ಅಂಕೆ ಸಂಖ್ಯೆ ಬರೆದ ಚೀಟಿ ಹಾಗೂ ಬಾಲ್ ಪೆನ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.