Friday, July 24, 2026
Join WhatsApp Group
HomeYour Voiceಸಹ್ಯಾದ್ರಿಯ ಸ್ವರ್ಗಧಾಮ ‘ಕೊಡಚಾದ್ರಿ’

ಸಹ್ಯಾದ್ರಿಯ ಸ್ವರ್ಗಧಾಮ ‘ಕೊಡಚಾದ್ರಿ’

ಪಶ್ಚಿಮ ಘಟ್ಟಗಳ ಹಸಿರು ಮಡಿಲಿನಲ್ಲಿ ನೆಲೆಸಿರುವ ಕೊಡಚಾದ್ರಿ ಕರ್ನಾಟಕದ ಅತ್ಯಂತ ಸುಂದರ ಪ್ರೇಕ್ಷಣೀಯ ತಾಣಗಳಲ್ಲಿ ಒಂದಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪೆಕಟ್ಟೆ ಸಮೀಪದಲ್ಲಿರುವ ಈ ಶಿಖರವು ಪ್ರಕೃತಿ ಪ್ರಿಯರು, ಸಾಹಸ ಚಾರಣಿಗರು ಮತ್ತು ಛಾಯಾಗ್ರಾಹಕರಿಗೆ ಸ್ವರ್ಗಧಾಮವೇ ಸರಿ.

ಸಮುದ್ರಮಟ್ಟದಿಂದ ಸುಮಾರು 1343 ಮೀಟರ್ ಎತ್ತರದಲ್ಲಿರುವ ಕೊಡಚಾದ್ರಿ, ಕರ್ನಾಟಕದ 13ನೇ ಅತಿ ಎತ್ತರದ ಶಿಖರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಈ ಪ್ರದೇಶ ದಟ್ಟ ಅರಣ್ಯ, ಶೋಲ ಕಾಡುಗಳು, ಮಂಜಿನಿಂದ ಆವರಿಸಿದ ಬೆಟ್ಟಗಳು, ಜಲಪಾತಗಳು ಮತ್ತು ಅಪರೂಪದ ಸಸ್ಯ ಸಂಕುಲಗಳಿಂದ ಸಮೃದ್ಧವಾಗಿದೆ.

ಕೊಡಚಾದ್ರಿಯ ಮತ್ತೊಂದು ವಿಶೇಷತೆ ಅದರ ಆಧ್ಯಾತ್ಮಿಕ ಮಹತ್ವ. ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಈ ಪರ್ವತ ಶ್ರೇಣಿಯ ಹಿನ್ನಲೆಯಲ್ಲಿ ನೆಲೆಸಿದೆ. ಸ್ಥಳಪುರಾಣದ ಪ್ರಕಾರ, ಮೂಲ ಮೂಕಾಂಬಿಕಾ ದೇವಿಯನ್ನು ಕೊಡಚಾದ್ರಿಯಿಂದ ಕೊಲ್ಲೂರಿಗೆ ಪ್ರತಿಷ್ಠಾಪಿಸಲಾಗಿದೆ ಎನ್ನಲಾಗುತ್ತದೆ. ಶಿಖರದ ಸಮೀಪದಲ್ಲಿರುವ ಮೂಲ ಮೂಕಾಂಬಿಕಾ ದೇವಸ್ಥಾನ ಇಂದಿಗೂ ಪುರಾತನತೆಯ ನೆನಪನ್ನು ಹೊತ್ತಿದೆ. ದೇವಾಲಯದ ಬಳಿಯ ಸುಮಾರು 40 ಅಡಿ ಎತ್ತರದ ಕಬ್ಬಿಣದ ಕಂಬವನ್ನು ಸ್ಥಳೀಯರು ದೇವಿಯ ತ್ರಿಶೂಲ ಎಂದು ನಂಬುತ್ತಾರೆ.

ಶಿಖರದ ಮೇಲ್ಭಾಗದಲ್ಲಿರುವ ಸರ್ವಜ್ಞ ಪೀಠ ಕೊಡಚಾದ್ರಿಯ ಪ್ರಮುಖ ಆಕರ್ಷಣೆಯಾಗಿದೆ. ಆದಿ ಶಂಕರಾಚಾರ್ಯರು ಇಲ್ಲಿ ತಪಸ್ಸು ಮಾಡಿದ್ದರು ಎಂಬ ನಂಬಿಕೆ ಇದೆ. ಅಲ್ಲಿಂದ ಮುಂದಕ್ಕೆ ಕಡಿದಾದ ದಾರಿಯಲ್ಲಿ ಇಳಿದರೆ ‘ಚಿತ್ರಮೂಲ’ ಎಂಬ ಸ್ಥಳ ಸಿಗುತ್ತದೆ. ಇದೇ ಸೌಪರ್ಣಿಕಾ ನದಿ ಉಗಮಸ್ಥಳ ಎಂದು ಕರೆಯಲ್ಪಡುತ್ತದೆ.

ಕೊಡಚಾದ್ರಿಯ ಸೂರ್ಯಾಸ್ತದ ದೃಶ್ಯ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಬೆಟ್ಟಗಳ ನಡುವೆ ಕೆಂಪು ಹೊಳಪಿನಲ್ಲಿ ಮುಳುಗುವ ಸೂರ್ಯನ ದೃಶ್ಯ ನೋಡುವುದೇ ಒಂದು ವಿಶಿಷ್ಟ ಅನುಭವ. ಈ ಕಾರಣಕ್ಕೇ ವರ್ಷಪೂರ್ತಿ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಕೊಡಚಾದ್ರಿಗೆ ತೆರಳಲು ಅರಣ್ಯ ಇಲಾಖೆಯ ಅನುಮತಿ ಅಗತ್ಯವಾಗಿದ್ದು, ಮುಂಚಿತ ಬುಕ್ಕಿಂಗ್ ಮೂಲಕ ಜೀಪ್ ವ್ಯವಸ್ಥೆ ಲಭ್ಯವಿದೆ. ಪ್ರವಾಸಿಗರಿಗೆ ಸಂಜೆ ಸೂರ್ಯಾಸ್ತದವರೆಗೆ ಮಾತ್ರ ಪ್ರವೇಶ ಅವಕಾಶ ನೀಡಲಾಗುತ್ತದೆ.

ಈ ಪ್ರದೇಶದ ಸುತ್ತಮುತ್ತಲೂ ಅನೇಕ ಆಕರ್ಷಕ ತಾಣಗಳಿವೆ. ಹಿಡ್ಲುಮನೆ ಫಾಲ್ಸ್, ನಿಟ್ಟೂರು ತೂಗು ಸೇತುವೆ, ನಗರಕೋಟೆ, ದೇವಗಂಗೆ ಹಾಗೂ ಗೌರಿ ತೀರ್ಥ ಪ್ರವಾಸಿಗರ ಮೆಚ್ಚಿನ ಸ್ಥಳಗಳಾಗಿವೆ. ಉಳಿಯಲು ಹೋಂಸ್ಟೇ ಹಾಗೂ ಹೋಟೆಲ್ ವ್ಯವಸ್ಥೆಯೂ ಲಭ್ಯವಿದೆ.

ಬೆಂಗಳೂರುದಿಂದ ಸುಮಾರು 388 ಕಿ.ಮೀ, ಶಿವಮೊಗ್ಗದಿಂದ 115 ಕಿ.ಮೀ, ಕೊಲ್ಲೂರಿನಿಂದ 21 ಕಿ.ಮೀ ಹಾಗೂ ಮಂಗಳೂರಿನಿಂದ 165 ಕಿ.ಮೀ ದೂರದಲ್ಲಿರುವ ಕೊಡಚಾದ್ರಿ, ಸಹ್ಯಾದ್ರಿಯ ಮಡಿಲಿನಲ್ಲಿರುವ ನಿಜವಾದ ಪ್ರಕೃತಿ ರತ್ನವಾಗಿದೆ.

– ರಕ್ಷಿತಾ ಹೆಚ್. ಗೋಪಾಲ್, ಸಂಪೆಕಟ್ಟೆ.

ಎಂ.ಜಿ.ಎಂ ಕಾಲೇಜು ಉಡುಪಿ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share