Saturday, May 30, 2026
HomeCrimeದುಬೈ ಫ್ಯಾಷನ್‌ ಶೋ ನೆಪದಲ್ಲಿ ಮಾನವ ಕಳ್ಳಸಾಗಣೆ!

ದುಬೈ ಫ್ಯಾಷನ್‌ ಶೋ ನೆಪದಲ್ಲಿ ಮಾನವ ಕಳ್ಳಸಾಗಣೆ!

ಕೊಚ್ಚಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ | ದೇಶವನ್ನೇ ಬೆಚ್ಚಿಬೀಳಿಸಿದ ಘಟನೆ

ಕೊಚ್ಚಿ: ಮಾಡೆಲಿಂಗ್‌, ಫ್ಯಾಷನ್‌ ಶೋ ಹಾಗೂ ವಿದೇಶದಲ್ಲಿ ಹೆಚ್ಚಿನ ಸಂಬಳದ ಉದ್ಯೋಗದ ಆಮಿಷವೊಡ್ಡಿ ಮಹಿಳೆಯರನ್ನು ಯುಎಇಗೆ ಕರೆದೊಯ್ದು ಮಾನವ ಕಳ್ಳಸಾಗಣೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ್ದ ಅಂತಾರಾಷ್ಟ್ರೀಯ ಜಾಲವನ್ನು ಕೊಚ್ಚಿ ಸಿಟಿ ಪೊಲೀಸರು ಭೇದಿಸಿರುವುದು ದೇಶವನ್ನೇ ಬೆಚ್ಚಿಬೀಳಿಸಿದೆ.

ಕೊಚ್ಚಿ ನಗರ ಡಿಸಿಪಿ ಅಸ್ವತಿ ಜಿಜಿ ನೇತೃತ್ವದ ವಿಶೇಷ ತನಿಖಾ ತಂಡ (SIT) ಪ್ರಕರಣದ ತನಿಖೆ ನಡೆಸುತ್ತಿದ್ದು, ಇದುವರೆಗೆ ಐವರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳು ಯುಎಇಯಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಬಲೆ

ಪೊಲೀಸರ ಪ್ರಕಾರ, 2026ರ ಜನವರಿಯಲ್ಲಿ ದುಬೈನಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಫ್ಯಾಷನ್‌ ಶೋ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಜಾಹೀರಾತುಗಳನ್ನು ಹರಡಲಾಗಿತ್ತು. ಮಾಡೆಲ್‌ಗಳು, ಮೇಕಪ್‌ ಆರ್ಟಿಸ್ಟ್‌ಗಳು ಹಾಗೂ ಉದ್ಯೋಗ ಅರಸುತ್ತಿದ್ದ ಯುವತಿಯರನ್ನು ಗುರಿಯಾಗಿಸಿಕೊಂಡು ಅಂತಾರಾಷ್ಟ್ರೀಯ ಅವಕಾಶ ಹಾಗೂ ಹೆಚ್ಚಿನ ಆದಾಯದ ಭರವಸೆ ನೀಡಲಾಗಿತ್ತು.

ಕೆಲವರಿಗೆ ವೀಸಾ ಹಾಗೂ ಉದ್ಯೋಗ ವ್ಯವಸ್ಥೆ ಮಾಡುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಣವನ್ನೂ ಪಡೆಯಲಾಗಿದೆ ಎನ್ನಲಾಗಿದೆ. ಒಬ್ಬ ಯುವತಿಯಿಂದ 5 ಲಕ್ಷ ರೂ ವಸೂಲಿ ಮಾಡಿರುವ ಆರೋಪವೂ ಕೇಳಿಬಂದಿದೆ.

ದುಬೈನಲ್ಲಿ ಭೀಕರ ಶೋಷಣೆ

ದುಬೈಗೆ ಭೇಟಿ ವೀಸಾದಲ್ಲಿ ಕರೆದೊಯ್ಯಲ್ಪಟ್ಟ ಮಹಿಳೆಯರನ್ನು ಅಪಾರ್ಟ್‌ಮೆಂಟ್‌ಗಳಲ್ಲಿ ಬಂಧನದಂತೆಯೇ ಇರಿಸಲಾಗುತ್ತಿತ್ತು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಅವರಿಗೆ ಮಾದಕ ವಸ್ತು ಮಿಶ್ರಿತ ಪಾನೀಯಗಳನ್ನು ನೀಡಿ ಪ್ರಜ್ಞೆ ತಪ್ಪಿಸಿದ ಬಳಿಕ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿತ್ತು.

ಈ ಕೃತ್ಯಗಳ ವಿಡಿಯೋ ಹಾಗೂ ಫೋಟೋಗಳನ್ನು ಚಿತ್ರೀಕರಿಸಿ, ಬಳಿಕ ಅದನ್ನೇ ಬೆದರಿಕೆಯ ಸಾಧನವಾಗಿ ಬಳಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಆ ದೃಶ್ಯಗಳನ್ನು ಪೀಡಿತರ ಕುಟುಂಬದವರಿಗೆ ಕಳುಹಿಸಿ ಮಾನಸಿಕ ಒತ್ತಡ ಹೇರುವ ಕೆಲಸವೂ ನಡೆದಿರುವ ಮಾಹಿತಿ ಬಹಿರಂಗವಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಇಬ್ಬರು ಮಹಿಳೆಯರ ವೀಸಾ ಅವಧಿ ಮುಗಿದ ಬಳಿಕ, ಸ್ಥಳೀಯರ ನೆರವಿನಿಂದ ಅವರು ಬಂಧನದಿಂದ ತಪ್ಪಿಸಿಕೊಂಡು ಕುಟುಂಬವನ್ನು ಸಂಪರ್ಕಿಸಿದ್ದಾರೆ. ನಂತರ ಕೇರಳಕ್ಕೆ ಮರಳಿ ಮರಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಲ್ಲಿಂದ ಪ್ರಕರಣದ ತನಿಖೆ ವೇಗ ಪಡೆದುಕೊಂಡಿದೆ.

ಬಂಧಿತರು

ಪೊಲೀಸರು ಕನಿಷ್ಠ ಏಳು ಮಂದಿಯ ಸಂಘಟಿತ ಜಾಲವಿರುವುದನ್ನು ಪತ್ತೆಹಚ್ಚಿದ್ದಾರೆ. ಇದುವರೆಗೆ ಸಿಂಧು, ಬಿಲಾಲ್‌, ಅಲೀನಾ ಅಬ್ರಹಾಂ, ಮಂಜಿಮಾ, ಮಾಯಾ ಎಂ ಸೇರಿದಂತೆ ಇನ್ನಿಬ್ಬರು ಆರೋಪಿಗಳಾದ ಶಾಮ್ಲಾ ಮತ್ತು ರೆಹ್ಮತ್‌ ಯುಎಇಯಲ್ಲಿ ತಲೆಮರೆಸಿಕೊಂಡಿದ್ದಾರೆ.

ಬಹುಮುಖ ತನಿಖೆ

ಪ್ರಕರಣದಲ್ಲಿ ಅಂಡರ್‌ವರ್ಡ್‌ ಸಂಪರ್ಕ, ಹಣಕಾಸು ವ್ಯವಹಾರ, ಯುಪಿಐ ಹಣ ವರ್ಗಾವಣೆ ಹಾಗೂ ಅಂತಾರಾಷ್ಟ್ರೀಯ ಚಿನ್ನ ಕಳ್ಳಸಾಗಣೆ ಸಂಪರ್ಕಗಳನ್ನೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಪೀಡಿತರಿಗೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸಾಕ್ಷಿದಾರರ ಸುರಕ್ಷತೆಯ ಮೇಲೂ ವಿಶೇಷ ಗಮನ ಹರಿಸಲಾಗಿದೆ.

ಕೊಚ್ಚಿ ಪೊಲೀಸ್ ಆಯುಕ್ತ ಎಸ್‌. ಕಲಿರಾಜ್ ಮಹೇಶ್ ಕುಮಾರ್ ಅವರ ಪ್ರಕಾರ, ಇನ್ನಷ್ಟು ಮಹಿಳೆಯರು ಗುಪ್ತವಾಗಿ ಮುಂದೆ ಬರುತ್ತಿದ್ದು, ಮಹಿಳಾ ಸಹಾಯವಾಣಿಗಳ ಮೂಲಕ ಸುರಕ್ಷಿತ ದೂರು ವ್ಯವಸ್ಥೆ ಮಾಡಲಾಗಿದೆ.

ವಿದೇಶದಲ್ಲಿ ಸುಲಭವಾಗಿ ಹಣ ಮಾಡಬಹುದು, ಮಾಡಲಿಂಗ್ ಚಾನ್ಸ್ ಸಿಗುತ್ತದೆ ಎಂದು ನಂಬಿ ಅಪರಿಚಿತರ ಕೈ ಹಿಡಿದು ಹೊರಡುವ ಮುನ್ನ ನೂರು ಬಾರಿ ಯೋಚಿಸಿ. ಇಲ್ಲದಿದ್ದರೆ ಇಂತಹ ಖದೀಮರ ವರಸೆಗೆ ಬಲಿಯಾಗಬೇಕಾದೀತು. ಎಚ್ಚರ!

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share