Monday, September 7, 2026
Join WhatsApp Group
HomeCrimeಒಂದೊಂದಾಗಿ ಮಾಯವಾದ ಚಿನ್ನ | ಕೆಲಸದಾಕೆಯ ಮೇಲೆಯೇ ಅನುಮಾನ!

ಒಂದೊಂದಾಗಿ ಮಾಯವಾದ ಚಿನ್ನ | ಕೆಲಸದಾಕೆಯ ಮೇಲೆಯೇ ಅನುಮಾನ!

ದಾಂಡೇಲಿ: ಮನೆಯ ಆರ್ಥಿಕ ಅಗತ್ಯಗಳಿಗಾಗಿ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಚಿನ್ನಾಭರಣಗಳನ್ನು ಬಿಡಿಸಿಕೊಂಡು ಬಂದ ಕುಟುಂಬವೊಂದು, ಅವುಗಳನ್ನು ಪರಿಶೀಲಿಸಿದಾಗ ಬೆಚ್ಚಿಬಿದ್ದಿದೆ. ಏಕೆಂದರೆ, ಸುಮಾರು ಒಂದು ವರ್ಷದ ಅವಧಿಯಲ್ಲಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಒಂದೊಂದಾಗಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ದಾಂಡೇಲಿಯ ಕೆಎಚ್‌ಬಿ ಕಾಲೋನಿಯ ನಿವಾಸಿ ಕಾವ್ಯ ಸೋಮಶೇಖರ ಗೌಡ ನೀಡಿದ ದೂರಿನ ಮೇರೆಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಕಾವ್ಯ ಅವರ ಪತಿ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಆಗಿದ್ದು, ಕೆಲಸಗಾರರ ವೇತನ ಹಾಗೂ ಕೆಲಸದ ಸಾಮಗ್ರಿಗಳ ಖರೀದಿಗಾಗಿ ಆಗಾಗ ಮನೆಯ ಚಿನ್ನಾಭರಣಗಳನ್ನು ಮಣಿಪ್ಪುರಂ ಫೈನಾನ್ಸ್‌ನಲ್ಲಿ ಅಡವಿಟ್ಟು, ಬಳಿಕ ಬಿಡಿಸಿಕೊಂಡು ಬರುವ ಪದ್ಧತಿ ಇತ್ತು. ಅದೇ ರೀತಿ ಜುಲೈ 7ರಂದು ಕುಟುಂಬದವರು ಅಡವಿಟ್ಟಿದ್ದ ಎಲ್ಲ ಆಭರಣಗಳನ್ನು ಬಿಡಿಸಿಕೊಂಡು ಬಂದು ಪರಿಶೀಲಿಸಿದಾಗ ಆಘಾತಕಾರಿ ಸಂಗತಿ ಗೊತ್ತಾಗಿದೆ.

10 ಗ್ರಾಂನಿಂದ 20 ಗ್ರಾಂವರೆಗಿನ ಚಿನ್ನದ ಚೈನ್‌ಗಳು, ಬ್ರೇಸ್‌ಲೆಟ್‌ಗಳು, ಉಂಗುರಗಳು, ಬಳೆಗಳು, ಕಿವಿಯೋಲೆಗಳು ಸೇರಿದಂತೆ ಒಟ್ಟು 136 ಗ್ರಾಂ ತೂಕದ, ಸುಮಾರು 15.05 ಲಕ್ಷ ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿರುವುದು ಪತ್ತೆಯಾಗಿದೆ.

ಆಗಸ್ಟ್ 5, 2025ರಿಂದ ಜುಲೈ 7, 2026ರ ನಡುವಿನ ಅವಧಿಯಲ್ಲಿ ಈ ಕಳ್ಳತನ ನಡೆದಿರಬಹುದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮನೆಯಲ್ಲಿದ್ದ ಆಭರಣಗಳು ಒಂದೇ ಬಾರಿ ಕಳುವಾಗಿಲ್ಲ, ಬದಲಾಗಿ ಒಂದೊಂದಾಗಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಈ ಪ್ರಕರಣದಲ್ಲಿ ಮನೆಯ ಕೆಲಸಕ್ಕೆ ಬರುತ್ತಿದ್ದ ದಾಂಡೇಲಿಯ ಗಾಂವಠಾಣಾ ನಿವಾಸಿ ಶಹನಾಜ್ ಸಲೀಂ ಕಾಕರ್ ಎಂಬ ಮಹಿಳೆಯ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಮನೆಯ ಹಿರಿಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ತಡವಾಗಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ದಾಂಡೇಲಿ ನಗರ ಪೊಲೀಸರು ತನಿಖೆ ಆರಂಭಿಸಿದ್ದು, ನಿಜಕ್ಕೂ ಚಿನ್ನವನ್ನು ಯಾರು ಕದ್ದರು ಅಥವಾ ಈ ನಿಗೂಢ ನಾಪತ್ತೆಯ ಹಿಂದೆ ಇನ್ನೇನಾದರೂ ಕಾರಣವಿದೆಯೇ ಎಂಬುದು ತನಿಖೆಯ ಬಳಿಕವೇ ಸ್ಪಷ್ಟವಾಗಬೇಕಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share