ಯಲ್ಲಾಪುರ: ತಾಲೂಕಿನ ಅರಬೈಲ ಮಾರುತಿ ದೇವಸ್ಥಾನ ಸಮೀಪ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಬಸ್ ಪ್ರಯಾಣಿಕರು ಗಾಯಗೊಂಡ ಘಟನೆ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 27ರಂದು ಬೆಳಗಿನ ಜಾವ 1.30ರಿಂದ 1.40ರ ಅವಧಿಯಲ್ಲಿ ವಿ.ಆರ್.ಎಲ್ ಬಸ್ ಚಾಲಕ ನಾಗರಾಜ ಬಸಯ್ಯ ಗವನ್ನವರ ಅವರು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದು, ಅರಬೈಲ ಮಾರುತಿ ದೇವಸ್ಥಾನ ಸಮೀಪ ಬೆಳ್ತಂಗಡಿ ತಾಲೂಕಿನ ಅಂಡಕೇರಿ ಹೌಸ್ ನಿವಾಸಿ ಹಾಗೂ ಲಾರಿ ಚಾಲಕ ಮಹಮ್ಮದ್ ಶರೀಪ್ ಅಬ್ದುಲ್ಲಾ ಚಲಾಯಿಸುತ್ತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದ ಬಳಿಕ ಬಸ್ಸಿನಲ್ಲಿದ್ದ ಪ್ರಯಾಣಿಕರು ಕೆಳಗೆ ಇಳಿದ ಸಂದರ್ಭ, ಹಿಂದಿನಿಂದ ಬಂದ ಮತ್ತೊಂದು ಲಾರಿ ಚಾಲಕ ವಿಷ್ಣು ವಾಸುದೇವ ನಾಯ್ಕ ಕೂಡ ವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ವಿ.ಆರ್.ಎಲ್ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಘಟನೆಯಲ್ಲಿ ಬಸ್ ಪ್ರಯಾಣಿಕರಾದ ಸಂಪತ್ ಹನುಮಂತ ಬಂಡಿವಡ್ಡರ, ಜ್ಯೋತಿ ಸಂಪತ್ ಬಂಡಿವಡ್ಡರ ಅವರಿಗೆ ಗಾಯಗಳಾಗಿದ್ದು, ಅಪಘಾತದಲ್ಲಿ ಮೂರು ವಾಹನಗಳು ಜಖಂಗೊಂಡಿವೆ.
ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.