Sunday, June 14, 2026
HomeLocal Newsಮಾಜಿ ಸದಸ್ಯನ ಪ್ರಶ್ನೆಗೆ ತಬ್ಬಿಬ್ಬಾದ ಅಧಿಕಾರಿಗಳು!

ಮಾಜಿ ಸದಸ್ಯನ ಪ್ರಶ್ನೆಗೆ ತಬ್ಬಿಬ್ಬಾದ ಅಧಿಕಾರಿಗಳು!

ಅಧಿಕಾರಿಗಳ ಗೈರುಹಾಜರಿ ವಿರುದ್ಧ ಸುಬ್ಬಣ್ಣ ಉದ್ದಾಬೈಲ ಆಕ್ರೋಶ

ಯಲ್ಲಾಪುರ: ಗ್ರಾಮೀಣ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸುವ ಮತ್ತು ಆಡಳಿತವನ್ನು ಜನರ ಎದುರು ಉತ್ತರದಾಯಿತ್ವಕ್ಕೆ ಒಳಪಡಿಸುವ ಉದ್ದೇಶದಿಂದ ನಡೆಸಲಾಗುವ ಗ್ರಾಮಸಭೆಗಳು ಇತ್ತೀಚಿನ ದಿನಗಳಲ್ಲಿ ಕೇವಲ ಕಾಟಾಚಾರದ ಸಭೆಗಳಾಗಿ ಬದಲಾಗುತ್ತಿವೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ವಿವಿಧ ಇಲಾಖೆಗಳ ಅಧಿಕಾರಿಗಳು ಗೈರಾಗುವುದು, ಜನರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಗದಿರುವುದು ಹಾಗೂ ಪ್ರಮುಖ ಸಮಸ್ಯೆಗಳ ಕುರಿತು ಯಾವುದೇ ಸ್ಪಷ್ಟ ನಿರ್ಧಾರಗಳು ಹೊರಬರದಿರುವುದು ಗ್ರಾಮಸಭೆಗಳ ಮಹತ್ವವನ್ನೇ ಕುಗ್ಗಿಸುತ್ತಿದೆ. ಇಂತಹ ಆತಂಕಗಳ ನಡುವೆಯೇ ನಡೆದ ಚಂದಗುಳಿ ಗ್ರಾಮ ಪಂಚಾಯತ ಗ್ರಾಮಸಭೆಯಲ್ಲಿ ಗ್ರಾ.ಪಂ ಮಾಜಿ ಸದಸ್ಯ ಸುಬ್ಬಣ್ಣ ಉದ್ದಾಬೈಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಗಮನ ಸೆಳೆಯಿತು.

ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದ ವೇಳೆ ಮಾತನಾಡಿದ ಅವರು, “ನಿಮ್ಮ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರು ಲಭ್ಯರಿದ್ದಾರೆಯೇ?” ಎಂದು ಪ್ರಶ್ನಿಸಿದರು. ಆದರೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲು ವಿಫಲರಾದರು.

ನಂತರ ನೋಡಲ್ ಅಧಿಕಾರಿಗಳನ್ನು ಪ್ರಶ್ನಿಸಿದ ಸುಬ್ಬಣ್ಣ ಉದ್ದಾಬೈಲ, “ಇಂದಿನ ಗ್ರಾಮಸಭೆಗೆ ಯಾವುದೇ ಇಲಾಖೆಯ ಪ್ರಮುಖ ಅಧಿಕಾರಿಗಳು ಹಾಜರಾಗಿಲ್ಲ. ಹೀಗಿರುವಾಗ ಗ್ರಾಮಸಭೆ ನಡೆಸುವ ಉದ್ದೇಶವೇನು?” ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೂ ಅಧಿಕಾರಿಗಳಿಂದ ಸ್ಪಷ್ಟ ಉತ್ತರ ದೊರೆಯಲಿಲ್ಲ.

ತಾಲೂಕಿನ ವಿವಿಧ ಇಲಾಖೆಗಳಲ್ಲಿನ ಸಿಬ್ಬಂದಿ ಕೊರತೆಯನ್ನು ಪ್ರಸ್ತಾಪಿಸಿದ ಅವರು, “ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ತಾಲೂಕು ಮಟ್ಟದಲ್ಲಿ ಯಾವುದೇ ಇಲಾಖೆಯಲ್ಲಿಯೂ ಅಗತ್ಯ ಸಿಬ್ಬಂದಿ ಇಲ್ಲ. ಈ ಸಮಸ್ಯೆಗಳಿಗೆ ನಿಮ್ಮ ಉತ್ತರವೇನು?” ಎಂದು ಪ್ರಶ್ನಿಸಿದಾಗಲೂ ಅಧಿಕಾರಿಗಳು ಮೌನ ವಹಿಸಿದರು.

ಹೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಸಹಸ್ರಳ್ಳಿ–ಉಪಳೇಶ್ವರ/ಮಳಲಗಾಂ ಫೀಡರ್‌ಗಳನ್ನು ಪ್ರತ್ಯೇಕಗೊಳಿಸಿ ವಿದ್ಯುತ್ ಪೂರೈಕೆಯಲ್ಲಿ ಸುಧಾರಣೆ ತರಬಹುದಲ್ಲವೇ ಎಂದು ಕೇಳಿದರು. ಇದಕ್ಕೆ ಅಧಿಕಾರಿಗಳು “ಪ್ರಸ್ತಾವನೆ ಕಳುಹಿಸಲಾಗಿದೆ” ಎಂದು ಉತ್ತರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸುಬ್ಬಣ್ಣ ಉದ್ದಾಬೈಲ, “ಈ ಮಾರ್ಗ ಈಗಾಗಲೇ ಖಾಲಿ ಇದ್ದು, ಈಗಿನ ವ್ಯವಸ್ಥೆಯಲ್ಲೇ ಫೀಡರ್ ಬೇರ್ಪಡಿಸಲು ಸಾಧ್ಯವಿದೆ. ಕೇವಲ ಪ್ರಸ್ತಾವನೆ ಕಳುಹಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಮಂಜೂರಾತಿಗಾಗಿ ವರ್ಷಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ತಕ್ಷಣವೇ ಕಾರ್ಯರೂಪಕ್ಕೆ ಬರುವ ಪರಿಹಾರ ಕಂಡುಕೊಳ್ಳಬೇಕು” ಎಂದು ಒತ್ತಾಯಿಸಿದರು.

ಗ್ರಾಮಸಭೆಯಲ್ಲಿ ರೈತರಿಗೆ ಅತ್ಯಗತ್ಯವಾಗಿರುವ ತೋಟಗಾರಿಕೆ ಇಲಾಖೆ, ಕೆಎಸ್‌ಆರ್‌ಟಿಸಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಲೋಕೋಪಯೋಗಿ ಇಲಾಖೆ, ಮೀನುಗಾರಿಕೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಹಲವು ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದದ್ದು ಗ್ರಾಮಸಭೆಯ ಗಂಭೀರತೆಯನ್ನೇ ಪ್ರಶ್ನಿಸುವಂತಿತ್ತು. ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಬೇಕಾದ ಅಧಿಕಾರಿಗಳು ಗೈರಾಗಿರುವುದು ಗ್ರಾಮಸಭೆಯ ಉದ್ದೇಶವನ್ನೇ ಹಾಳು ಮಾಡುತ್ತಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಗ್ರಾಮಸ್ಥರು ಕೂಡ ಅಧಿಕಾರಿಗಳ ನಿರಾಸಕ್ತಿ ಹಾಗೂ ಆಡಳಿತದ ಉದಾಸೀನ ಧೋರಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share