Monday, September 7, 2026
Join WhatsApp Group
HomeLocal Newsಅಷ್ಟ ಪ್ರಶ್ನೆಗೆ ಉತ್ತರ ಕೊಡಿ!

ಅಷ್ಟ ಪ್ರಶ್ನೆಗೆ ಉತ್ತರ ಕೊಡಿ!

ಶಾಸಕ ಭೀಮಣ್ಣ ನಾಯ್ಕ ವಿರುದ್ಧ ಗದೆ ಬೀಸಿದ ಅನಂತಮೂರ್ತಿ ಹೆಗಡೆ

ಶಿರಸಿ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ₹142 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮೂಲ ಸ್ವರೂಪವನ್ನು ಹಾಳುಗೆಡವಲಾಗಿದೆ ಎಂದು ಆರೋಪಿಸಿರುವ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ, ಶಾಸಕ ಭೀಮಣ್ಣ ನಾಯ್ಕ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಗರದ ದೀನದಯಾಳ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನದಿಂದ ಶಿರಸಿಗೆ ಮಂಜೂರಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಯೋಜನೆಯನ್ನು ರಾಜಕೀಯ ಕಾರಣಗಳಿಂದ ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಿದರು.

2020ರ ನವೆಂಬರ್ 13ರಂದು ಕಾರ್ಡಿಯಾಲಜಿ, ನ್ಯೂರಾಲಜಿ, ನೆಫ್ರಾಲಜಿ ಸೇರಿದಂತೆ ವಿವಿಧ ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ಒಳಗೊಂಡ ಆಸ್ಪತ್ರೆಗೆ ಅನುಮೋದನೆ ದೊರೆತಿತ್ತು. ಯೋಜನೆಗೆ ₹112 ಕೋಟಿ ಕಟ್ಟಡ ನಿರ್ಮಾಣ ಹಾಗೂ ₹30 ಕೋಟಿ ವೈದ್ಯಕೀಯ ಉಪಕರಣಗಳಿಗಾಗಿ ಮೀಸಲಿಡಲಾಗಿತ್ತು. ಕಟ್ಟಡ ಕಾಮಗಾರಿ ಶೇ.80 ಪೂರ್ಣಗೊಂಡ ಬಳಿಕ ವೈದ್ಯರ ನೇಮಕಾತಿ ಹಾಗೂ ಅಗತ್ಯ ಉಪಕರಣಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಬೇಕಿತ್ತು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅಗತ್ಯವಾಗಿದ್ದ ₹26 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳ ಪ್ರಸ್ತಾವನೆಯನ್ನು ಕಡಿತಗೊಳಿಸಿ ಕೇವಲ ₹5.20 ಕೋಟಿಗೆ ಇಳಿಸಲಾಗಿದೆ. ಬಡ ರೋಗಿಗಳಿಗೆ ಉಚಿತವಾಗಿ ಲಭ್ಯವಾಗಬೇಕಿದ್ದ ₹15 ಕೋಟಿ ಮೌಲ್ಯದ ಎಂಆರ್‌ಐ ಯಂತ್ರ, ₹2 ಕೋಟಿ ಮೌಲ್ಯದ ಸಿಟಿ ಸ್ಕ್ಯಾನ್ ಸೇರಿದಂತೆ ಹಲವು ಉಪಕರಣಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿದರು.

100 ಹಾಸಿಗೆಗಳಿಂದ 250 ಹಾಸಿಗೆಗಳಿಗೆ ಮೇಲ್ದರ್ಜೆಗೇರಿದ ಆಸ್ಪತ್ರೆಗೆ 197 ಸಿಬ್ಬಂದಿ ಅಗತ್ಯವಿದ್ದರೂ ಪ್ರಸ್ತುತ ಕೇವಲ 90 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಚ್ಚುವರಿಯಾಗಿ ಬೇಕಾಗಿರುವ 107 ಹುದ್ದೆಗಳಲ್ಲಿ ಕೇವಲ 37 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಆಸ್ಪತ್ರೆಯಲ್ಲಿ ಹೃದಯರೋಗ, ನ್ಯೂರಾಲಜಿ ಹಾಗೂ ನೆಫ್ರಾಲಜಿ ತಜ್ಞರ ನೇಮಕಾತಿಯೂ ಆಗಿಲ್ಲ ಎಂದು ಅವರು ಹೇಳಿದರು.

ರಾಜ್ಯ ಆರೋಗ್ಯ ಸಚಿವರು ಎರಡು ಬಾರಿ ಶಿರಸಿಗೆ ಭೇಟಿ ನೀಡಿ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರೂ, ಅದಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆ ಅಥವಾ ಆಡಳಿತಾತ್ಮಕ ಕ್ರಮಗಳು ಕಂಡುಬಂದಿಲ್ಲ. ಇದು ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಎಂದು ಟೀಕಿಸಿದರು.

ಟ್ರಾಮಾ ಸೆಂಟರ್, ಕ್ಯಾಥ್ ಲ್ಯಾಬ್, ನ್ಯೂರಾಲಜಿ ಹಾಗೂ ನೆಫ್ರಾಲಜಿ ವಿಭಾಗಗಳಿಲ್ಲದೆ ಆಸ್ಪತ್ರೆಯನ್ನು ಕೇವಲ ತಾಲೂಕು ಮಟ್ಟದ ಆಸ್ಪತ್ರೆಯಾಗಿ ಉಳಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಅಪಘಾತ ಸಂತ್ರಸ್ತರು, ಹೃದಯರೋಗಿಗಳು ಹಾಗೂ ಡಯಾಲಿಸಿಸ್ ರೋಗಿಗಳಿಗೆ ತೊಂದರೆಯಾಗುತ್ತಿದೆ. ಉತ್ತರ ಕನ್ನಡ ಭಾಗದ ರೋಗಿಗಳು ಚಿಕಿತ್ಸೆಗಾಗಿ ಮಂಗಳೂರು, ಹುಬ್ಬಳ್ಳಿ ಹಾಗೂ ಶಿವಮೊಗ್ಗಕ್ಕೆ ತೆರಳಬೇಕಾದ ಪರಿಸ್ಥಿತಿ ಮುಂದುವರಿದಿದೆ ಎಂದು ಹೇಳಿದರು.

ಈ ಸಂಬಂಧ ತಾವು ಈಗಾಗಲೇ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿರುವುದಾಗಿ ತಿಳಿಸಿದ ಅನಂತಮೂರ್ತಿ ಹೆಗಡೆ, ಆಸ್ಪತ್ರೆಯನ್ನು ಮೂಲ ಮಂಜೂರಾತಿಯಂತೆ ಅಭಿವೃದ್ಧಿಪಡಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು. ಅಲ್ಲದೆ, ಆಸ್ಪತ್ರೆ ಯೋಜನೆಗೆ ಸಂಬಂಧಿಸಿದ ಎಂಟು ಪ್ರಶ್ನೆಗಳಿಗೆ ಶಾಸಕ ಭೀಮಣ್ಣ ನಾಯ್ಕ ಸಾರ್ವಜನಿಕವಾಗಿ ಉತ್ತರಿಸಬೇಕು ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಆನಂದ ಸಾಲೇರ್, ಶಿರಸಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ, ಬನವಾಸಿ ಮಂಡಲ ಅಧ್ಯಕ್ಷ ರಮೇಶ್ ನಾಯ್ಕ್ ಸೇರಿದಂತೆ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share