Saturday, June 13, 2026
HomeAgricultureಮಳೆ ಮಾಪನ ಯಂತ್ರಗಳು ನಿದ್ದೆಯಿಂದೆದ್ದಾವೇ?!

ಮಳೆ ಮಾಪನ ಯಂತ್ರಗಳು ನಿದ್ದೆಯಿಂದೆದ್ದಾವೇ?!

ಕಾರವಾರ: ಮುಂಗಾರು ಮಳೆ ರಾಜ್ಯದಾದ್ಯಂತ ಆರಂಭವಾಗುತ್ತಿರುವ ಹೊತ್ತಿನಲ್ಲಿ ಮಳೆ ಮಾಪನ ಯಂತ್ರಗಳ ಕಾರ್ಯಕ್ಷಮತೆಯ ಬಗ್ಗೆ ರೈತಾಪಿ ವಲಯದಲ್ಲಿ ಮತ್ತೆ ತಲೆಬಿಸಿ ಆರಂಭವಾಗಿದೆ.

 ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ರಾಜ್ಯದಾದ್ಯಂತ ಸ್ಥಾಪಿಸಿರುವ ಸಾವಿರಾರು ಸ್ವಯಂಚಾಲಿತ ಮಳೆ ಮಾಪನ (TRG) ಮತ್ತು ಹವಾಮಾನ ಮಾಪನ (TWS) ಕೇಂದ್ರಗಳ ಪೈಕಿ ಬಹುತೇಕ ಯಂತ್ರಗಳು ವರ್ಷಗಳಿಂದ ದುರಸ್ತಿಯಿಲ್ಲದೆ ಕಾರ್ಯನಿರ್ವಹಿಸದೆ ನಿಂತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ರಾಜ್ಯದಾದ್ಯಂತ ಹವಾಮಾನ ಆಧಾರಿತ ಬೆಳೆ ವಿಮೆ, ಅತಿವೃಷ್ಟಿ-ಅನಾವೃಷ್ಟಿ ಪರಿಹಾರ, ಪ್ರವಾಹ ಮುನ್ಸೂಚನೆ, ಭೂಕುಸಿತ ಅಪಾಯದ ಅಂದಾಜು ಸೇರಿದಂತೆ ಅನೇಕ ಸರ್ಕಾರಿ ಯೋಜನೆಗಳು ಈ ಮಳೆ ಮಾಪನ ಕೇಂದ್ರಗಳ ಅಂಕಿಅಂಶಗಳನ್ನೇ ಅವಲಂಬಿಸಿವೆ. ಇಂತಹ ಸಂದರ್ಭದಲ್ಲಿ ಸಾವಿರಾರು ಯಂತ್ರಗಳು ಕೆಟ್ಟು ನಿಂತಿರುವುದು ಕೃಷಿ ವಲಯದಲ್ಲಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಏನಿದು ಮಳೆ ಮಾಪನ ಯಂತ್ರ?

ಗ್ರಾಮ ಪಂಚಾಯಿತಿ, ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಅಳವಡಿಸಲಾಗಿರುವ ಟೆಲಿಮೆಟ್ರಿಕ್ ರೇನ್ ಗೇಜ್ (TRG) ಮತ್ತು ಟೆಲಿಮೆಟ್ರಿಕ್ ವೆದರ್ ಸ್ಟೇಷನ್ (TWS) ಕೇಂದ್ರಗಳು ದಿನದ 24 ಗಂಟೆಯೂ ಮಳೆಯ ಪ್ರಮಾಣ, ತಾಪಮಾನ, ಆರ್ದ್ರತೆ, ಗಾಳಿಯ ವೇಗ ಸೇರಿದಂತೆ ವಿವಿಧ ಹವಾಮಾನ ಮಾಹಿತಿಗಳನ್ನು ಸ್ವಯಂಚಾಲಿತವಾಗಿ ಸಂಗ್ರಹಿಸಿ KSNDMC ಕೇಂದ್ರಕ್ಕೆ ರವಾನಿಸುತ್ತವೆ.

ಈ ಅಂಕಿಅಂಶಗಳ ಆಧಾರದ ಮೇಲೆ ಮಳೆ ಕೊರತೆ ಅಥವಾ ಅತಿವೃಷ್ಟಿ ಸಂಭವಿಸಿದ ಪ್ರದೇಶಗಳನ್ನು ಗುರುತಿಸಲಾಗುತ್ತದೆ. ಬೆಳೆ ವಿಮೆ ಪರಿಹಾರ ನಿಗದಿಪಡಿಸುವಾಗಲೂ ಇದೇ ದತ್ತಾಂಶ ಪ್ರಮುಖ ಆಧಾರವಾಗಿರುತ್ತದೆ.

ರೈತರಿಗೆ ಆಗುತ್ತಿರುವ ಅನ್ಯಾಯವೇನು?

ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಮಳೆ ಪ್ರಮಾಣದ ದಾಖಲೆಯೇ ಪ್ರಮುಖ ಅಂಶ. ಒಂದು ಪ್ರದೇಶದಲ್ಲಿ ವಾಸ್ತವವಾಗಿ ಭಾರೀ ಮಳೆ ಅಥವಾ ಮಳೆ ಕೊರತೆ ಕಂಡುಬಂದಿದ್ದರೂ, ಅಲ್ಲಿನ ಮಳೆ ಮಾಪನ ಯಂತ್ರ ಕಾರ್ಯನಿರ್ವಹಿಸದಿದ್ದರೆ ಅಥವಾ ತಪ್ಪು ಮಾಹಿತಿ ದಾಖಲಿಸಿದರೆ ರೈತರಿಗೆ ಸಿಗಬೇಕಾದ ವಿಮೆ ಪರಿಹಾರವೇ ತಪ್ಪಿಹೋಗುವ ಸಾಧ್ಯತೆ ಇರುತ್ತದೆ.

ಕಳೆದ ಎರಡು ವರ್ಷಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಸಾವಿರಾರು ರೈತರು ಬೆಳೆ ವಿಮೆ ಪರಿಹಾರದಿಂದ ವಂಚಿತರಾಗಿರುವುದಕ್ಕೆ ಮಳೆ ಮಾಪನ ಕೇಂದ್ರಗಳ ದೋಷಪೂರಿತ ಕಾರ್ಯವೈಖರಿಯೂ ಒಂದು ಕಾರಣ ಎಂದು ರೈತ ಸಂಘಟನೆಗಳು ಆರೋಪಿಸುತ್ತಿವೆ.

ಉತ್ತರ ಕನ್ನಡದ ಸ್ಥಿತಿ

ಈ ಸಮಸ್ಯೆ ಮಲೆನಾಡಿನ ಕೆಲ ಭಾಗಗಳಿಗೆ ಮಾತ್ರ ಸೀಮಿತವಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯ ರೈತರೂ ಇದೇ ಸಂಕಷ್ಟ ಎದುರಿಸುತ್ತಿದ್ದಾರೆ.

ಜಿಲ್ಲೆಯ ಯಲ್ಲಾಪುರ, ಸಿದ್ದಾಪುರ, ಜೋಯಿಡಾ, ಅಂಕೋಲಾ, ಕುಮಟಾ, ಕಾರವಾರ ಸೇರಿದಂತೆ ಅನೇಕ ಭಾಗಗಳಲ್ಲಿ ಅಲ್ಪ ಅಂತರದಲ್ಲೇ ಮಳೆಯ ಪ್ರಮಾಣದಲ್ಲಿ ಭಾರೀ ವ್ಯತ್ಯಾಸ ಕಂಡುಬರುತ್ತದೆ. ಒಂದೇ ಗ್ರಾಮದಲ್ಲಿ ಭಾರೀ ಮಳೆಯಾದರೆ ಪಕ್ಕದ ಗ್ರಾಮದಲ್ಲಿ ಮಳೆ ಇಲ್ಲದಿರುವುದು ಸಾಮಾನ್ಯ.

ಇಂತಹ ಭೌಗೋಳಿಕ ಪರಿಸ್ಥಿತಿಯಲ್ಲಿ ನಿಖರವಾದ ಮಳೆ ಮಾಪನ ಕೇಂದ್ರಗಳು ಅತ್ಯಗತ್ಯ. ಒಂದು ಕೇಂದ್ರದ ಮಾಹಿತಿ ಆಧರಿಸಿ ಹಲವಾರು ಗ್ರಾಮಗಳ ವಿಮೆ ಲೆಕ್ಕಾಚಾರ ನಡೆಸಿದರೆ ಅನ್ಯಾಯವಾಗುವ ಸಾಧ್ಯತೆ ಹೆಚ್ಚಿದೆ.

ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆ ಪ್ರವಾಹ, ಭೂಕುಸಿತ, ಅತಿವೃಷ್ಟಿ ಹಾಗೂ ಕಾಡಂಚಿನ ಕೃಷಿಗೆ ಹೆಸರುವಾಸಿಯಾಗಿರುವುದರಿಂದ ಇಲ್ಲಿ ಮಳೆ ಮಾಪನ ಕೇಂದ್ರಗಳ ಕಾರ್ಯಕ್ಷಮತೆ ಇನ್ನಷ್ಟು ಮಹತ್ವ ಪಡೆಯುತ್ತದೆ.

ಮುಂಗಾರು ಸಂದರ್ಭದಲ್ಲೇ ಹೆಚ್ಚಿದ ಆತಂಕ

ಈಗಾಗಲೇ ಮುಂಗಾರು ಆರಂಭವಾಗಿದ್ದು, ಮುಂದಿನ ಎರಡು ತಿಂಗಳುಗಳಲ್ಲಿ ರಾಜ್ಯದ ಬಹುತೇಕ ಮಳೆ ದಾಖಲಾಗಲಿದೆ. ಇದೇ ಅವಧಿಯ ಮಾಹಿತಿಯೇ ಬೆಳೆ ವಿಮೆ ಹಾಗೂ ವಿಪತ್ತು ನಿರ್ವಹಣೆಯ ನಿರ್ಣಾಯಕ ಅಂಶವಾಗಿರುತ್ತದೆ.

ಆದರೆ ಅನೇಕ ಕಡೆಗಳಲ್ಲಿ ಯಂತ್ರಗಳು ಇನ್ನೂ ದುರಸ್ತಿ ಹಂತದಲ್ಲಿದ್ದರೆ ಅಥವಾ ಹೊಸ ಯಂತ್ರಗಳ ಅಳವಡಿಕೆ ಪೂರ್ಣಗೊಳ್ಳದಿದ್ದರೆ ಈ ವರ್ಷದ ದತ್ತಾಂಶದ ವಿಶ್ವಾಸಾರ್ಹತೆಯ ಮೇಲೆಯೇ ಪ್ರಶ್ನೆ ಮೂಡಲಿದೆ.

ಪ್ರತಿ ವರ್ಷ ರೈತರು ಸಾವಿರಾರು ರೂಪಾಯಿ ವಿಮಾ ಪ್ರೀಮಿಯಂ ಪಾವತಿಸುತ್ತಿದ್ದಾರೆ. ಆದರೆ ಆ ವಿಮೆಯ ಲೆಕ್ಕಾಚಾರಕ್ಕೆ ಆಧಾರವಾಗಿರುವ ಮಳೆ ಮಾಪನ ಯಂತ್ರಗಳೇ ಸರಿಯಾಗಿ ಕೆಲಸ ಮಾಡದಿದ್ದರೆ ಬೆಳೆ ವಿಮೆಯ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗುತ್ತದೆ. ಮುಂಗಾರು ಈಗಾಗಲೇ ಆರಂಭವಾಗಿದೆ. ಕಾರ್ಯಾದೇಶ, ಟೆಂಡರ್ ಮತ್ತು ಕಡತಗಳ ಹಂತ ದಾಟಿ, ಮಳೆ ಮಾಪನ ಯಂತ್ರಗಳು ನಿಜವಾಗಿಯೂ ಕಾರ್ಯನಿರ್ವಹಿಸುತ್ತಿವೆಯೇ ಎಂಬುದೇ ಈಗ ರೈತರ ಮುಂದಿರುವ ಬಹುದೊಡ್ಡ ಪ್ರಶ್ನೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share