ಶಿರಸಿ: ಮಣಪ್ಪುರಂ ಫೈನಾನ್ಸ್ ಲಿಮಿಟೆಡ್‌ನ ಶಿರಸಿ ಶಾಖೆಗೆ ₹4.80 ಲಕ್ಷ ವಂಚನೆ ಎಸಗಿರುವ ಆರೋಪದಡಿ ಇಬ್ಬರ ವಿರುದ್ಧ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಪ್ಪುರಂ ಫೈನಾನ್ಸ್ ಲಿಮಿಟೆಡ್‌ನ ಶಾಖಾ ವ್ಯವಸ್ಥಾಪಕಿ ಅರ್ಪಿತಾ ದೇವೇಂದ್ರ ನಾಯ್ಕ ನೀಡಿದ ದೂರಿನ ಮೇರೆಗೆ, ಗಾಂಧಿನಗರದ 6ನೇ ಕ್ರಾಸ್ ನಿವಾಸಿ ರಾಘವೇಂದ್ರ ಸಿದ್ದಣ್ಣ ಕಲ್ಲಕುಟ್ರಿ ಹಾಗೂ ಅಂಬಾಗಿರಿ, ಗಾಂಧಿನಗರ 2ನೇ ಕ್ರಾಸ್ ನಿವಾಸಿ ರಾಮಕೃಷ್ಣ ರಾಮಚಂದ್ರ ಹೆಗಡೆ ವಿರುದ್ಧ ಪ್ರಕರಣ ದಾಖಲಾಗಿದೆ.
ಜೂನ್ 1ರಂದು ರಾಘವೇಂದ್ರ ಕಲ್ಲಕುಟ್ರಿ ಶಾಖಾ ವ್ಯವಸ್ಥಾಪಕಿಗೆ ಕರೆ ಮಾಡಿ, ಒಬ್ಬ ಗ್ರಾಹಕನನ್ನು ಕಳುಹಿಸುತ್ತಿದ್ದು, ಆತನಿಗೆ ಚಿನ್ನಾಭರಣ ಸಾಲ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಬಳಿಕ, ಆ ವ್ಯಕ್ತಿಯು ಕೆನರಾ ಬ್ಯಾಂಕ್‌ನ ದೇವಿಕೆರೆ ಶಾಖೆಯಲ್ಲಿ 72.700 ಗ್ರಾಂ ಚಿನ್ನಾಭರಣವನ್ನು ಅಡವಿಟ್ಟು ₹4.80 ಲಕ್ಷ ಸಾಲ ಪಡೆದಿದ್ದು, ಅಲ್ಲಿ ಕಡಿಮೆ ಮೊತ್ತ ನೀಡಿರುವುದರಿಂದ ಹೆಚ್ಚಿನ ಸಾಲಕ್ಕಾಗಿ ಮಣಪ್ಪುರಂ ಫೈನಾನ್ಸ್‌ನಲ್ಲಿ ಚಿನ್ನವನ್ನು ಅಡವಿಡಲು ಬಯಸುತ್ತಿರುವುದಾಗಿ ತಿಳಿಸಿದ್ದರು.
ಜೂನ್ 2ರಂದು ರಾಘವೇಂದ್ರ ಕಲ್ಲಕುಟ್ರಿ ಅವರು ರಾಮಕೃಷ್ಣ ಹೆಗಡೆ ಅವರನ್ನು ಶಾಖೆಗೆ ಕರೆತಂದು ಅಗತ್ಯ ದಾಖಲೆಗಳು ಹಾಗೂ ಕೆನರಾ ಬ್ಯಾಂಕ್‌ನ ಅಡಮಾನ ರಶೀದಿಯನ್ನು ನೀಡಿದ್ದರು. ದಾಖಲೆಗಳ ಪರಿಶೀಲನೆಯ ಬಳಿಕ ಬ್ಯಾಂಕ್ ನಿಯಮಾನುಸಾರ ರಾಮಕೃಷ್ಣ ಹೆಗಡೆ ಅವರ ಖಾತೆಗೆ ₹4.80 ಲಕ್ಷವನ್ನು ಆನ್‌ಲೈನ್ ಮೂಲಕ ಜಮಾ ಮಾಡಲಾಗಿತ್ತು.
ಆದರೆ, ಸಾಲ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಹೇಳಿ ಇಬ್ಬರೂ ಬ್ಯಾಂಕ್‌ನಿಂದ ಹೊರಹೋಗಿದ್ದು, ಬಳಿಕ ಕೆನರಾ ಬ್ಯಾಂಕ್‌ನಲ್ಲಿದ್ದ ಚಿನ್ನಾಭರಣವನ್ನು ಬಿಡಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ನಂತರ ಚಿನ್ನಾಭರಣವನ್ನು ಮಣಪ್ಪುರಂ ಫೈನಾನ್ಸ್‌ಗೆ ಹಸ್ತಾಂತರಿಸುವುದಾಗಿ ಭರವಸೆ ನೀಡಿದರೂ ಅದನ್ನು ಮರಳಿಸದೆ ಕಾಲಹರಣ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಬಗ್ಗೆ ವಿಚಾರಿಸಿದಾಗ ಆರೋಪಿತರು ಪರಸ್ಪರ ಹೊಣೆಗಾರಿಕೆಯನ್ನು ಒಬ್ಬರ ಮೇಲೊಬ್ಬರು ಹಾಕಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಕೊನೆಗೆ ದೂರುದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸವಾಲು ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.