Saturday, June 13, 2026
HomeLocal Newsಅಧಿಕ ಮಾಸದ ಪುಣ್ಯಪರ್ವ; ಶ್ರೀ ಕ್ಷೇತ್ರ ಮಂಜುಗುಣಿಯಲ್ಲಿ ವಿಶೇಷ ಪೂಜೆ

ಅಧಿಕ ಮಾಸದ ಪುಣ್ಯಪರ್ವ; ಶ್ರೀ ಕ್ಷೇತ್ರ ಮಂಜುಗುಣಿಯಲ್ಲಿ ವಿಶೇಷ ಪೂಜೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಕ್ಷೇತ್ರ ಮಂಜುಗುಣಿ ಅಧಿಕ ಜ್ಯೇಷ್ಠ ಮಾಸದ ವಿಶೇಷ ಆಚರಣೆಗಳ ಅಂಗವಾಗಿ ಸಾವಿರಾರು ಭಕ್ತರ ಸಮಾಗಮದಿಂದ ಭಕ್ತಿಸಾಗರವಾಗಿ ಮಾರ್ಪಟ್ಟಿತ್ತು.ಶ್ರೀ ವೆಂಕಟರಮಣ ದೇವರ ಸನ್ನಿಧಿಯಲ್ಲಿ ನಡೆದ ವಿವಿಧ ಧಾರ್ಮಿಕ ಸೇವೆಗಳು, ಪೂಜೆಗಳು ಹಾಗೂ ಸಂಕಲ್ಪ ಕಾರ್ಯಕ್ರಮಗಳಲ್ಲಿ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡರು.

ಹಿಂದೂ ಧರ್ಮದಲ್ಲಿ ಅಧಿಕ ಮಾಸವನ್ನು ಅತ್ಯಂತ ಪವಿತ್ರ ಕಾಲವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಕೈಗೊಳ್ಳುವ ಪೂಜೆ, ದಾನ, ಜಪ, ತಪಸ್ಸು ಹಾಗೂ ಸೇವೆಗಳಿಗೆ ವಿಶೇಷ ಪುಣ್ಯಫಲ ದೊರೆಯುತ್ತದೆ ಎಂಬ ನಂಬಿಕೆಯಿದೆ. ಇದೇ ಹಿನ್ನೆಲೆ ಅಧಿಕ ಜ್ಯೇಷ್ಠ ಬಹುಳ ಸಪ್ತಮಿಯ ಅಂಗವಾಗಿ ಇಂದು ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಬೆಳಿಗ್ಗೆ ದೇವಸ್ಥಾನದ ಗರ್ಭಗುಡಿಯಲ್ಲಿ ಭಕ್ತರ ಸಮ್ಮುಖದಲ್ಲಿ ಶತಧಾರಾಭಿಷೇಕ ಸೇವೆ ನೆರವೇರಿತು. ವೇದಘೋಷ, ಮಂತ್ರೋಚ್ಚಾರಣೆ ಹಾಗೂ ಗೋವಿಂದ ನಾಮಸ್ಮರಣೆಯ ನಡುವೆ ನಡೆದ ಅಭಿಷೇಕವು ಭಕ್ತರನ್ನು ಭಾವಪರವಶರನ್ನಾಗಿಸಿತು.

ನಂತರ ಭೂ ವೈಕುಂಠದ್ವಾರ ಮಂಟಪದಲ್ಲಿರುವ ರಜತ ಪೀಠ ಮಂಟಪದ ಎದುರು ವಿಷ್ಣುಸಹಸ್ರನಾಮ ಪಾರಾಯಣ, ತುಳಸಿ ಅರ್ಚನೆ ಹಾಗೂ ಮಹಾಪೂಜೆಗಳು ವೈಭವದಿಂದ ನಡೆದವು. ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಹರಿಯ ಆಶೀರ್ವಾದ ಕೋರಿದರು.

ವೈಯಕ್ತಿಕ ಸಂಕಲ್ಪ ಸೇವೆಗಳಿಗೂ ಹೆಚ್ಚಿನ ಸ್ಪಂದನೆ ವ್ಯಕ್ತವಾಯಿತು. 333 ತುಪ್ಪದ ದೀಪಗಳ ದೀಪಾರಾಧನೆ, ದೀಪ ನಮಸ್ಕಾರ, 33 ಅಪೂಪ ಪೂಜೆ ಹಾಗೂ ದಾನ, ದ್ರವ್ಯಾಂಜಲಿ ಸೇರಿದಂತೆ ವಿವಿಧ ಸೇವೆಗಳಲ್ಲಿ ಭಕ್ತರು ಭಾಗವಹಿಸಿ ಕುಟುಂಬದ ಸುಖ-ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.

ಶತಮಾನಗಳ ಇತಿಹಾಸ ಹೊಂದಿರುವ ಮಂಜುಗುಣಿ ಕ್ಷೇತ್ರವು ಭಕ್ತರ ನಂಬಿಕೆಯ ಕೇಂದ್ರವಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸಿ ಶ್ರೀ ವೆಂಕಟರಮಣ ದೇವರ ದರ್ಶನ ಪಡೆಯುತ್ತಾರೆ. ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ದೈವವಾಗಿ ಭಕ್ತರು ದೇವರನ್ನು ಆರಾಧಿಸುತ್ತಾರೆ.

ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದು, ಮಧ್ಯಾಹ್ನ ಪ್ರಸಾದ ಭೋಜನ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.

ಅಧಿಕ ಮಾಸದ ಈ ಪವಿತ್ರ ಸಂದರ್ಭದಲ್ಲಿ ದೇವರ ದರ್ಶನ ಹಾಗೂ ವಿಶೇಷ ಸೇವೆಗಳಲ್ಲಿ ಭಾಗವಹಿಸಿದ ಭಕ್ತರು ಆಧ್ಯಾತ್ಮಿಕ ಶಾಂತಿ, ಹೊಸ ಉತ್ಸಾಹ ಹಾಗೂ ಆತ್ಮವಿಶ್ವಾಸವನ್ನು ಅನುಭವಿಸಿದರು. ಧರ್ಮ, ಭಕ್ತಿ ಹಾಗೂ ಸೇವೆಯ ಮಹತ್ವವನ್ನು ಸಾರಿದ ಕಾರ್ಯಕ್ರಮವು ಕ್ಷೇತ್ರದ ಧಾರ್ಮಿಕ ಮಹತ್ವವನ್ನು ಮತ್ತಷ್ಟು ಎತ್ತಿಹಿಡಿಯಿತು.

ವರದಿ- ಶ್ರೀಕಾಂತ ವೆಂಕಟೇಶ್ ನಾಯ್ಕ್.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share