ಯಲ್ಲಾಪುರ: ಬೇಡ್ತಿ-ವರದಾ ನದಿ ಜೋಡಣೆ ಹಾಗೂ ಅಘನಾಶಿನಿ-ಶರಾವತಿ ಯೋಜನೆಗಳ ವಿರುದ್ಧದ ಜನಜಾಗೃತಿ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸುವ ಉದ್ದೇಶದಿಂದ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ತಾಲೂಕು ಮಟ್ಟದಲ್ಲಿ ವೃಕ್ಷಾರೋಪಣ ಮತ್ತು ಪ್ರತಿಜ್ಞಾ ಅಭಿಯಾನ ಆರಂಭಿಸಲಿದೆ.
ಈ ಕುರಿತು ಸಮಿತಿ ಪ್ರಕಟಣೆ ನೀಡಿದ್ದು, ಜೂನ್ 10ರಂದು ಸಂಜೆ 4 ಗಂಟೆಗೆ ಬೇಡ್ತಿ ನದಿ ಸೇತುವೆ ಸಮೀಪದ ಹೊಲೆಹುಲಿಯಪ್ಪನ ಸನ್ನಿಧಿಯ ಬಳಿ ಹಸಿರು ಸಮಾರಂಭವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಸೋಂದಾ ಸ್ವರ್ಣವಲ್ಲೀ ಮಠದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ವೃಕ್ಷಾರೋಪಣದ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಸಮಿತಿ ತಿಳಿಸಿದೆ.
ಬೇಡ್ತಿ (ಗಂಗಾವಳಿ) ಹಾಗೂ ಅಘನಾಶಿನಿ ಕಣಿವೆ ಪ್ರದೇಶದ ರೈತರು, ಪರಿಸರ ಹೋರಾಟಗಾರರು, ಸೀಮಾ ಪರಿಷತ್‌ಗಳು, ಮಾತೃಮಂಡಳಿಗಳು, ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು, ಸಹಕಾರಿ ಸಂಘಗಳ ಪ್ರತಿನಿಧಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ವಿವಿಧ ಸ್ವಸಹಾಯ ಸಂಘಗಳು, ಸಂಘ-ಸಂಸ್ಥೆಗಳ ಪ್ರಮುಖರು, ವನವಾಸಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.
ಈ ಅಭಿಯಾನದ ಮುಂದುವರಿದ ಭಾಗವಾಗಿ ಬೇಡ್ತಿ ನದಿಯ ತೀರ ಪ್ರದೇಶಗಳು, ಮಂಚಿಕೇರಿ, ಸೂರೆಮನೆ, ಉಮ್ಮಚಗಿ, ಮಾಗೋಡ, ಹೆಗ್ಗಾರ ಹಾಗೂ ಕಲ್ಲೇಶ್ವರ ಭಾಗಗಳಲ್ಲಿ ವೃಕ್ಷಾರೋಪಣ ಮತ್ತು ಪರಿಸರ ಸಂರಕ್ಷಣೆಯ ಪ್ರತಿಜ್ಞಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಸಮಿತಿ ತಿಳಿಸಿದೆ.
ನದಿ ಕಣಿವೆಗಳ ಸಂರಕ್ಷಣೆ, ಪರಿಸರ ಜಾಗೃತಿ ಹಾಗೂ ಜನಸಹಭಾಗಿತ್ವದ ಮೂಲಕ ನದಿ ಉಳಿಸುವ ಚಳುವಳಿಯನ್ನು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.