Friday, March 13, 2026
HomeInformationನೀವು ಮದ್ಯ ಪ್ರಿಯರಾ?; ಈ ಲೇಖನ ಓದಿ!

ನೀವು ಮದ್ಯ ಪ್ರಿಯರಾ?; ಈ ಲೇಖನ ಓದಿ!

ಒಂದು PEGನ ಕಥೆ!

ಪಾರ್ಟಿ ಅಥವಾ ಸ್ನೇಹಿತರ ಕೂಟದಲ್ಲಿ ಸಾಮಾನ್ಯವಾಗಿ ಕೇಳಿಸಿಕೊಳ್ಳುವ ಮಾತು, “ಒಂದು ಸ್ಮಾಲ್ ಪೆಗ್ ಸಾಕು” ಅಥವಾ “ಲಾರ್ಜ್ ಪೆಗ್ ಹಾಕು”. ಸ್ಮಾಲ್ ಅಂದರೆ 30 ಎಂಎಲ್, ಲಾರ್ಜ್ ಅಂದರೆ 60 ಎಂಎಲ್ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇದಕ್ಕಿಂತ ಬೇರೆ ಅಳತೆ ಯಾಕಿಲ್ಲ? 40 ಅಥವಾ 50 ಎಂಎಲ್ ಪೆಗ್ ಯಾಕೆ ಚಾಲ್ತಿಗೆ ಬಂದಿಲ್ಲ? ವಿಷಯ ಗಮ್ಮತ್ತಾಗಿದೆ, ಪೂರ್ತಿ ಓದಿ.

ಮೊದಲು, PEG ಎಂಬುದು ಯಾವುದೇ ಸಂಕ್ಷಿಪ್ತ ರೂಪವಲ್ಲ. Precious Evening Glass ಎನ್ನುವ ವಿವರಣೆಗೂ ಇತಿಹಾಸಿಕ ದಾಖಲೆಗಳಿಲ್ಲ, ಭಾಷಾಶಾಸ್ತ್ರೀಯ ಆಧಾರವೂ ಇಲ್ಲ. ‘Peg’ ಎಂಬ ಪದ ಇಂಗ್ಲಿಷ್ ಭಾಷೆಯಲ್ಲಿ ಹಿಂದಿನಿಂದಲೂ ಅಳತೆ ಅಥವಾ ಗುರುತು ಎಂಬ ಅರ್ಥದಲ್ಲಿ ಬಳಕೆಯಾಗುತ್ತಿದೆ.

ಬ್ರಿಟನ್‌ನ ಹಳೆಯ ಪಬ್‌ಗಳಲ್ಲಿ ಮದ್ಯದ ಗ್ಲಾಸ್‌ಗಳ ಒಳಭಾಗದಲ್ಲಿ ಚಿಕ್ಕ ಗುರುತುಗಳನ್ನು ಮಾಡುತ್ತಿದ್ದರು. ಆ ಗುರುತಿನವರೆಗೆ ಮದ್ಯ ಹಾಕುವುದೇ ಒಂದು ನಿಗದಿತ ಪ್ರಮಾಣ. ಆ ಗುರುತುಗಳಿಗೆ ‘ಪೆಗ್’ ಎನ್ನಲಾಗುತ್ತಿತ್ತು. ಕ್ರಮೇಣ ‘ಪೆಗ್’ ಎಂಬ ಪದವೇ ಮದ್ಯದ ನಿಗದಿತ ಅಳತೆಯನ್ನು ಸೂಚಿಸುವ ಪದವಾಗಿ ಬಳಕೆಗೆ ಬಂದಿದೆ.

ಇನ್ನೊಂದು ಸಾಮಾನ್ಯ ಪ್ರಶ್ನೆ–ಪೆಗ್‌ಗಳು ಯಾಕೆ 30 ಮತ್ತು 60 ಎಂಎಲ್‌ ಮಾತ್ರ? ಇದರ ಮೂಲ ಸಂಪೂರ್ಣವಾಗಿ ಬ್ರಿಟಿಷ್ ಅಳತೆ ಪದ್ಧತಿಗೆ ಸಂಬಂಧಿಸಿದೆ. ಬ್ರಿಟಿಷ್ ವ್ಯವಸ್ಥೆಯಲ್ಲಿ ದ್ರವಗಳ ಅಳತೆಯನ್ನು ‘ಔನ್ಸ್’ಗಳಲ್ಲಿ ಲೆಕ್ಕ ಹಾಕಲಾಗುತ್ತಿತ್ತು. ಒಂದು ಔನ್ಸ್ ಸುಮಾರು 29.57 ಎಂಎಲ್ ಆಗುತ್ತದೆ, ಅದನ್ನು ಸರಳವಾಗಿ 30 ಎಂಎಲ್ ಎಂದು ಪರಿಗಣಿಸಲಾಯಿತು.
ಎರಡು ಔನ್ಸ್ ಅಂದರೆ ಸುಮಾರು 59 ಎಂಎಲ್, ಅದನ್ನು 60 ಎಂಎಲ್ ಎಂದು ಬಳಸಲಾಯಿತು. ಇದೇ ಮಾನದಂಡ ಜಾಗತಿಕವಾಗಿ ಸ್ಥಿರಗೊಂಡಿತು. 40 ಅಥವಾ 50 ಎಂಎಲ್ ಪೆಗ್‌ಗಳು ಚಾಲ್ತಿಗೆ ಬರದಿರುವುದಕ್ಕೂ ಇದೇ ಕಾರಣ.

ಸೋಶಿಯಲ್ ಮೀಡಿಯಾದಲ್ಲಿ “ಲಿವರ್ ಒಂದು ಗಂಟೆಗೆ 30 ಎಂಎಲ್ ಮದ್ಯ ಜೀರ್ಣಿಸಿಕೊಳ್ಳುತ್ತದೆ” ಎಂಬ ಮಿಥ್ಯೆಯೂ ಓಡಾಡುತ್ತಿರುತ್ತದೆ. ಲಿವರ್ ಮದ್ಯವನ್ನು ಮಿಲಿಲೀಟರ್ ಅಳತೆಯಲ್ಲಿ ಅಲ್ಲ, ಎಥನಾಲ್‌ನ ಗ್ರಾಂಗಳಲ್ಲಿ ಪ್ರಕ್ರಿಯೆಗೊಳಿಸುತ್ತದೆ.
ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯ ಲಿವರ್ ಒಂದು ಗಂಟೆಗೆ ಸುಮಾರು 7ರಿಂದ 10 ಗ್ರಾಂ ಎಥನಾಲ್ ಮಾತ್ರ ಒಡೆಯಬಲ್ಲದು. ಇದು ವ್ಯಕ್ತಿಯ ತೂಕ, ಲಿಂಗ, ಆರೋಗ್ಯ ಸ್ಥಿತಿ, ಆಹಾರ ಸೇವನೆ ಇತ್ಯಾದಿಗಳ ಮೇಲೆ ಬದಲಾಗುತ್ತದೆ.

ಭಾರತದಲ್ಲಿ ಜನಪ್ರಿಯವಾಗಿರುವ ಪಟಿಯಾಲಾ ಪೆಗ್ ಕೂಡ ಯಾವುದೇ ವೈಜ್ಞಾನಿಕ ಅಳತೆ ಅಲ್ಲ. ಪಟಿಯಾಲಾ ಮಹಾರಾಜಾ ಭೂಪೇಂದ್ರ ಸಿಂಗ್ ಅವರ ವೈಭವಯುತ ಆತಿಥ್ಯ ಮತ್ತು ದೊಡ್ಡ ಗ್ಲಾಸ್‌ಗಳಿಂದ ಈ ಪದ ಪ್ರಸಿದ್ಧಿಗೆ ಬಂದಿದೆ ಎನ್ನಲಾಗುತ್ತದೆ. ಸಾಮಾನ್ಯವಾಗಿ 90ರಿಂದ 120 ಎಂಎಲ್ ಮದ್ಯ ಇರುವ ಗ್ಲಾಸ್‌ಗಳನ್ನು ಪಟಿಯಾಲಾ ಪೆಗ್ ಎಂದು ಕರೆಯಲಾಗುತ್ತದೆ. ಇದು ಸಂಸ್ಕೃತಿಯಿಂದ ಬಂದ ಪದ, ನಿಯಮಿತ ಪ್ರಮಾಣವಲ್ಲ.

ಇನ್ನು, ಪೆಗ್ ಮತ್ತು ಶಾಟ್ ಒಂದೇ ಅಲ್ಲ ಎಂಬುದನ್ನು ಗಮನಿಸಬೇಕು. ಶಾಟ್ ಸಾಮಾನ್ಯವಾಗಿ 30 ಎಂಎಲ್ ಮದ್ಯವನ್ನು ಯಾವುದೇ ಮಿಕ್ಸ್ ಇಲ್ಲದೆ ಒಂದೇ ಬಾರಿ ಕುಡಿಯುವ ವಿಧಾನ. ಪೆಗ್ ಎಂದರೆ ನೀರು, ಸೋಡಾ ಇತ್ಯಾದಿ ಬೆರೆಸಿ ನಿಧಾನವಾಗಿ ಸಿಪ್ ಮಾಡುತ್ತಾ ಕುಡಿಯುವ ಅಳತೆಯಷ್ಟೇ.

ಒಟ್ಟಿನಲ್ಲಿ, 30 ಮತ್ತು 60 ಎಂಎಲ್ ಪೆಗ್‌ಗಳು ಬ್ರಿಟಿಷ್ ಔನ್ಸ್ ಪದ್ಧತಿಯ ಪರಂಪರೆ. ಆದರೆ ಒಂದು ಸಂಗತಿ ಮಾತ್ರ ಸ್ಪಷ್ಟ. ಮಿತವಾಗಿ ಕುಡಿದರೆ ದೇಹ ಸಹಿಸುತ್ತದೆ, ಮಿತಿ ಮೀರಿದರೆ ಅದೇ ಮೋಜು ಸಮಸ್ಯೆಯಾಗುತ್ತದೆ. ಕುಡಿಯುವ ಅಭ್ಯಾಸವೇ ಇಲ್ಲವೆಂದರಂತೂ…ಇನ್ನೂ ಒಳ್ಳೆಯದೇ!

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share