ಯಲ್ಲಾಪುರ: ನದಿ ಜೋಡಣೆ ಯೋಜನೆಯ ವಿರುದ್ಧ ನ. 3ರಂದು ನಡೆಯಲಿರುವ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟಕ್ಕೆ ಪ್ರತಿ ಪಂಚಾಯಿತಿಯಿಂದ ಸುಮಾರು 2 ಸಾವಿರ ಜನರನ್ನು ಸೇರಿಸುವ ನಿರೀಕ್ಷೆಯಿದೆ. ಸರ್ಕಾರಗಳು ಸ್ಥಳಕ್ಕೆ ಬಂದು ತಮ್ಮ ನಿರ್ಧಾರವನ್ನು ತಿಳಿಸುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಹೋರಾಟದ ಸಂಚಾಲನಾ ಸಮಿತಿಯ ಪ್ರಧಾನ ಸಂಚಾಲಕ ಹರಿಪ್ರಕಾಶ್ ಕೋಣೆಮನೆ ತಿಳಿಸಿದರು.
ಪಟ್ಟಣದ ಅಡಿಕೆ ಭವನದಲ್ಲಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ಸಂಚಾಲನಾ ಸಮಿತಿ ವತಿಯಿಂದ ನಡೆದ ಪಟ್ಟಣ ವ್ಯಾಪ್ತಿಯ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ತಿಂಗಳಿಂದಲೂ ಹೋರಾಟದ ಸಿದ್ಧತೆ ನಡೆಯುತ್ತಿದೆ. ಹಿರಿಯರಾದ ನಾರಾಯಣ ಭಟ್ ಅಗ್ಗಾಶಿಕುಂಬ್ರಿ ಅಧ್ಯಕ್ಷತೆಯಲ್ಲಿ ಸಂಚಾಲನಾ ಸಮಿತಿ ರಚಿಸಲಾಗಿದ್ದು, 50ಕ್ಕೂ ಹೆಚ್ಚು ಸಂಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪಂಚಾಯಿತಿ ಮಟ್ಟದ ಸಭೆಗಳಲ್ಲಿ ಸ್ಥಳೀಯ ಪ್ರಮುಖರಿಂದ ಸಲಹೆಗಳನ್ನು ಪಡೆಯಲಾಗಿದೆ. ಕಾಲೇಜು ವಿದ್ಯಾರ್ಥಿಗಳೂ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಯೋಜಿಸಲಾಗಿದ್ದು, ವಿದ್ಯಾರ್ಥಿ ಸಂಘಟನೆಗಳು ಈ ನಿಟ್ಟಿನಲ್ಲಿ ಶ್ರಮಿಸುತ್ತಿವೆ ಎಂದರು.
ಈಗಾಗಲೇ ಯೋಜನೆ ವಿರೋಧಿಸಿ ಶಿರಸಿ ಹಾಗೂ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಭೆ ಮತ್ತು ಧರಣಿ ನಡೆಸಲಾಗಿದೆ. ಆದರೆ ನಿರೀಕ್ಷಿತ ಪರಿಣಾಮ ಉಂಟಾಗಿಲ್ಲ. ಹಿಂದೆ ಬೇಡ್ತಿ ಜಲವಿದ್ಯುತ್ ಯೋಜನೆ ಮುಂದುವರಿದ ಹಂತ ತಲುಪಿದ್ದರೂ ಜನರ ಹೋರಾಟದಿಂದ ಸ್ಥಗಿತಗೊಂಡಿತ್ತು. ಈಗಲೂ ಶಾಂತಿಯುತ ರಸ್ತೆ ತಡೆ ಚಳವಳಿಯ ಮೂಲಕ ಸರ್ಕಾರಕ್ಕೆ ಜನರ ವಿರೋಧವನ್ನು ಮನವರಿಕೆ ಮಾಡಬೇಕಿದೆ. ಯೋಜನೆ ಸದ್ಯ ಸಮಗ್ರ ಯೋಜನಾ ವರದಿ (DPR) ಹಂತದಲ್ಲಿದ್ದು, ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿದರೆ ಯಶಸ್ಸು ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರದ ಪ್ರತಿನಿಧಿಗಳು ಸ್ಥಳಕ್ಕೆ ಬಂದು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸುವವರೆಗೂ ಹೋರಾಟ ಮುಂದುವರಿಯಲಿದೆ. ಸ್ವರ್ಣವಲ್ಲೀ ಶ್ರೀಗಳು ಕೂಡ ಈ ಕುರಿತು ಎಚ್ಚರಿಕೆ ನೀಡಿದ್ದು, ಶ್ರೀಗಳೇ ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿಗೆ ತಳ್ಳಬಾರದು. ಪಟ್ಟಣದ ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಹಿರಿಯ ಮುಖಂಡ ರಾಮು ನಾಯ್ಕ ಮಾತನಾಡಿ, ಈ ಹೋರಾಟ ತಮ್ಮ ಉಳಿವಿಗಾಗಿ ನಡೆಯುತ್ತಿದೆ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಯೋಜನೆಯಿಂದ ಗ್ರಾಮೀಣ ಜನರಿಗೆ ಮಾತ್ರವಲ್ಲ, ಪಟ್ಟಣದವರಿಗೂ ಸಮಸ್ಯೆಯಾಗಲಿದೆ. ಎಲ್ಲರೂ ತಪ್ಪದೇ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದರು.
ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ನರಸಿಂಹ ಸಾತೊಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಸ್ವರ್ಣವಲ್ಲೀ ಶ್ರೀಗಳ ಅನುಜ್ಞೆಯಂತೆ ಪಟ್ಟಣ ವ್ಯಾಪ್ತಿಯಲ್ಲಿ ಸಂಪರ್ಕ ಸಭೆ ನಡೆಸಲಾಗಿದ್ದು, ಪ್ರತಿ ಮನೆಗೂ ಕರಪತ್ರ ತಲುಪಿಸಿ ಮಾಹಿತಿ ನೀಡಲಾಗಿದೆ. ಹೋರಾಟ ಯಶಸ್ವಿಯಾಗುವ ವಿಶ್ವಾಸವಿದೆ ಎಂದರು.
ರಾಘವೇಂದ್ರ ಭಟ್ ಹಾಸಣಗಿ ಮಾತನಾಡಿ, ಗ್ರಾಮೀಣ ಭಾಗದ ಜಾಗೃತಿ ಸಭೆಗಳು ಯಶಸ್ವಿಯಾಗಿದ್ದು, ಪ್ರತಿಭಟನೆಗೂ ಉತ್ತಮ ಸ್ಪಂದನೆ ದೊರೆಯುವ ನಿರೀಕ್ಷೆಯಿದೆ. ಹೋರಾಟಕ್ಕೆ ಅಗತ್ಯವಾದ ಹಣಕಾಸು ಕ್ರೋಢೀಕರಣದ ಬಗ್ಗೆಯೂ ಯೋಜಿಸಬೇಕಿದೆ ಎಂದರು.
ಪ್ರಸಾದ ಹೆಗಡೆ ಮಾತನಾಡಿ, ವಿವಿಧ ಸಂಘಟನೆಗಳು ಕೈಜೋಡಿಸಿದರೆ ಪಟ್ಟಣ ಪ್ರದೇಶದಿಂದ ಹೆಚ್ಚಿನ ಜನರನ್ನು ಸೇರಿಸಬಹುದು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯರಾದ ಪ್ರಮೋದ್ ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ನಡೆದ ಒಂಬತ್ತು ಐತಿಹಾಸಿಕ ಚಳವಳಿಗಳಲ್ಲಿ ಎಂಟು ವಿಫಲವಾಗಿದ್ದರೂ, ಸ್ವರ್ಣವಲ್ಲೀ ಶ್ರೀಗಳ ನೇತೃತ್ವದ ಬೇಡ್ತಿ ಚಳವಳಿ ಯಶಸ್ವಿಯಾಗಿತ್ತು. ಹೀಗಾಗಿ, ಅವರ ನೇತೃತ್ವದಲ್ಲಿ ನಡೆಯಲಿರುವ ಈ ಹೋರಾಟವೂ ಯಶಸ್ವಿಯಾಗುವ ವಿಶ್ವಾಸವಿದೆ ಎಂದರು.
ಸಭೆಯಲ್ಲಿ ಮಾತೃಮಂಡಳಿಯ ರಮಾ ದೀಕ್ಷಿತ್, ಆಶಾ ಬಗನಗದ್ದೆ, ವಿ.ಟಿ. ಹೆಗಡೆ ತೊಂಡೆಕೆರೆ, ಶಿವಲಿಂಗಯ್ಯ ಅಲ್ಲಯ್ಯನವರಮಠ, ಗಣೇಶ ಹೆಗಡೆ ಪಣತಗೇರಿ, ಸಿಎ ಅಶ್ವಿನಿ ಹೆಬ್ಬಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಸ್ವಾಗತಿಸಿದರು. ನರಸಿಂಹ ಸಾತೊಡ್ಡಿ ನಿರೂಪಿಸಿದರು.