ಮೊದಲು BPCLನ ಈ ನಿಯಮ ತಿಳಿದುಕೊಳ್ಳಿ!
ಬಹುತೇಕ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಬಂದಾಗ ಒಂದು ಸಣ್ಣ ಗೊಂದಲ ಸಾಮಾನ್ಯ. ಬಿಲ್ನಲ್ಲಿ ಒಂದು ಮೊತ್ತ ಇರುತ್ತದೆ. ಆದರೆ ಸಿಲಿಂಡರ್ ತಂದುಕೊಟ್ಟ ವ್ಯಕ್ತಿ “ಲಾರಿ ಖರ್ಚು”, “ಡೆಲಿವರಿ ಚಾರ್ಜ್”, “ಮೇಲಿನ ಮಹಡಿ”, “ಟಿಪ್ಸ್” ಅಥವಾ ಇನ್ನಾವುದೋ ಕಾರಣ ಹೇಳಿ ₹20, ₹30 ಅಥವಾ ₹50 ಹೆಚ್ಚುವರಿ ಹಣ ಕೇಳಬಹುದು. ಅನೇಕರು ಇದು ಕಂಪನಿಯ ನಿಯಮವೇ ಇರಬಹುದು ಎಂದುಕೊಂಡು ಅಥವಾ ವಾದ-ವಿವಾದ ಬೇಡವೆಂದು ಆ ಹಣವನ್ನು ಕೊಟ್ಟು ಸುಮ್ಮನಾಗುತ್ತಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಈ ಗೊಂದಲ ಇನ್ನೂ ಹೆಚ್ಚು. ನಾವೇ ಸರ್ಕಸ್ ಮಾಡಿ, ಬೈಕಿಗೆ ಖಾಲಿ ಸಿಲಿಂಡರ್ ಕಟ್ಟಿಕೊಂಡು, ಗ್ಯಾಸ್ ಗೋದಾಮಿಗೆ ತೆರಳಿ ತರೋದು ರಗಳೆ, ಪೆಟ್ರೋಲಿಗೆ 100₹ ಬೇಕಲ್ರೀ, ಇಲ್ಲಿ ಅದೆಷ್ಟೋ ಹೆಚ್ಚು ತಗೋತಾರೆ ಬಿಡಿ ಅನ್ನುವವರೂ ಇದ್ದಾರೆ.
ಆದರೆ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ವಿತರಣೆಗೆ ಸಂಬಂಧಿಸಿದ ನಿಯಮಗಳನ್ನು ತಿಳಿದುಕೊಂಡರೆ, ಇಂತಹ ಅನಗತ್ಯ ವೆಚ್ಚವನ್ನು ಸುಲಭವಾಗಿ ತಪ್ಪಿಸಬಹುದು.
ಭಾರತ್ ಗ್ಯಾಸ್ ಸೇರಿದಂತೆ ತೈಲ ಕಂಪನಿಗಳ ನಿಯಮಗಳ ಪ್ರಕಾರ, ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ನ ಅಧಿಕೃತ ಮಾರಾಟ ದರದಲ್ಲಿಯೇ ವಿತರಕರ ಕಮಿಷನ್ ಹಾಗೂ ಮನೆಗೆ ತಲುಪಿಸುವ ವೆಚ್ಚ ಒಳಗೊಂಡಿರುತ್ತದೆ.
ಅಂದರೆ, ಗ್ರಾಹಕರು ಸಿಲಿಂಡರ್ ಬುಕ್ ಮಾಡಿದಾಗ ಸಿಗುವ ಅಧಿಕೃತ ರಶೀದಿಯಲ್ಲಿ ನಮೂದಿಸಿರುವ ಮೊತ್ತವನ್ನಷ್ಟೇ ಪಾವತಿಸಬೇಕು. ಸಾಮಾನ್ಯ ಸಂದರ್ಭಗಳಲ್ಲಿ ರಶೀದಿಯಲ್ಲಿರುವ ಮೊತ್ತಕ್ಕಿಂತ ಒಂದು ರೂಪಾಯಿ ಕೂಡ ಹೆಚ್ಚುವರಿಯಾಗಿ ನೀಡುವದು ಕಡ್ಡಾಯವಲ್ಲ.
ಅನೇಕ ಕಡೆಗಳಲ್ಲಿ ಡೆಲಿವರಿ ಸಿಬ್ಬಂದಿ ಲಾರಿ ಬಾಡಿಗೆ, ಸಂಬಳ, ದೂರದ ಪ್ರಯಾಣ ಅಥವಾ ಕಟ್ಟಡದ ಮೇಲಿನ ಮಹಡಿಗೆ ಹೊತ್ತು ತಂದಿದ್ದಕ್ಕಾಗಿ ಹೆಚ್ಚುವರಿ ಹಣ ಕೇಳುವುದು ಕಂಡುಬರುತ್ತದೆ. ಆದರೆ ಇಂತಹ ವಸೂಲಿ ಅಧಿಕೃತ ನಿಯಮಗಳ ಭಾಗವಲ್ಲ.
ನಿಮ್ಮ ಮನೆ ಮೊದಲ ಮಹಡಿಯಲ್ಲಿರಲಿ, ನಾಲ್ಕನೇ ಮಹಡಿಯಲ್ಲಿರಲಿ, ಕಟ್ಟಡದಲ್ಲಿ ಲಿಫ್ಟ್ ಇರಲಿ ಅಥವಾ ಇರದಿರಲಿ, ಸಾಮಾನ್ಯ ಡೆಲಿವರಿಗಾಗಿ ಹೆಚ್ಚುವರಿ ಹಣ ನೀಡುವ ಅಗತ್ಯವಿಲ್ಲ. ಗ್ರಾಹಕರು ಅಧಿಕೃತ ಬಿಲ್ನಲ್ಲಿರುವ ಮೊತ್ತವನ್ನಷ್ಟೇ ಪಾವತಿಸಬೇಕು.
ಆದಾಗ್ಯೂ ಕೆಲವು ವಿಶೇಷ ಸೇವೆಗಳಿಗೆ ಮಾತ್ರ ಅಧಿಕೃತವಾಗಿ ಹೆಚ್ಚುವರಿ ಶುಲ್ಕ ಅನ್ವಯಿಸಬಹುದು. ಉದಾಹರಣೆಗೆ, ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ದಿಷ್ಟ ಸಮಯದಲ್ಲೇ ಸಿಲಿಂಡರ್ ತಲುಪಿಸಬೇಕೆಂದು ವಿಶೇಷ ಸೇವೆ ಆಯ್ಕೆ ಮಾಡಿಕೊಂಡಿದ್ದರೆ ಅಥವಾ ಹೊಸ ಸಂಪರ್ಕ, ತಾಂತ್ರಿಕ ತಪಾಸಣೆ ಹಾಗೂ ಇನ್ಸ್ಟಾಲೇಶನ್ಗಳಿಗೆ ಸಂಬಂಧಿಸಿದ ಸೇವೆಗಳನ್ನು ಪಡೆದಿದ್ದರೆ ಕಂಪನಿಯ ನಿಯಮಗಳ ಪ್ರಕಾರ ನಿಗದಿತ ಶುಲ್ಕ ವಿಧಿಸಬಹುದು. ಆದರೆ ಇಂತಹ ಶುಲ್ಕಗಳಿಗೆ ಅಧಿಕೃತ ದಾಖಲೆ ಅಥವಾ ರಶೀದಿ ಇರಬೇಕು.
ಸಿಲಿಂಡರ್ ಸ್ವೀಕರಿಸುವ ಮೊದಲು ಗ್ರಾಹಕರು ರಶೀದಿಯನ್ನು ಪರಿಶೀಲಿಸುವುದು ಉತ್ತಮ ಅಭ್ಯಾಸ. ಅದರಲ್ಲಿ ನಮೂದಿಸಿರುವ ಮೊತ್ತ ಮತ್ತು ತಾವು ಪಾವತಿಸುವ ಮೊತ್ತ ಒಂದೇ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕೆಲವೊಮ್ಮೆ ರಶೀದಿಯಲ್ಲಿಯೇ “ಬಿಲ್ ಮೊತ್ತಕ್ಕಿಂತ ಹೆಚ್ಚಿನ ಹಣ ಪಾವತಿಸಬೇಡಿ” ಎಂಬ ಸೂಚನೆಯೂ ಇರುತ್ತದೆ. ಹೆಚ್ಚುವರಿ ಹಣಕ್ಕೆ ಯಾವುದೇ ಅಧಿಕೃತ ದಾಖಲೆ ಇಲ್ಲದಿದ್ದರೆ ಅಥವಾ ಅದರ ಬಗ್ಗೆ ಸ್ಪಷ್ಟ ಮಾಹಿತಿ ನೀಡದಿದ್ದರೆ ಎಚ್ಚರಿಕೆಯಿಂದಿರುವುದು ಒಳಿತು.
ಒಂದು ವೇಳೆ ಡೆಲಿವರಿ ಸಿಬ್ಬಂದಿ ಹೆಚ್ಚುವರಿ ಹಣಕ್ಕಾಗಿ ಒತ್ತಾಯಿಸಿದರೆ ಅಥವಾ ಹಣ ನೀಡದಿದ್ದರೆ ಸಿಲಿಂಡರ್ ನೀಡುವುದಿಲ್ಲ ಎಂದು ಬೆದರಿಸಿದರೆ, ಗ್ರಾಹಕರು ಸುಮ್ಮನಿರುವ ಅಗತ್ಯವಿಲ್ಲ. ಸಂಬಂಧಿಸಿದ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿ ಪ್ರಶ್ನಿಸಬಹುದು.
ತೈಲ ಕಂಪನಿಯ ಗ್ರಾಹಕ ಸೇವಾ ಕೇಂದ್ರಕ್ಕೆ ದೂರು ನೀಡಬಹುದು. ಕಂಪನಿಯ ಅಧಿಕೃತ ವೆಬ್ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕವೂ ದೂರು ದಾಖಲಿಸಬಹುದು. ಜೊತೆಗೆ ಬಿಲ್ ಪ್ರತಿಯನ್ನು ಹಾಗೂ ಡೆಲಿವರಿ ವಿವರಗಳನ್ನು ದಾಖಲಾಗಿ ಇಟ್ಟುಕೊಳ್ಳುವುದು ಮುಂದಿನ ಕ್ರಮಗಳಿಗೆ ಸಹಕಾರಿಯಾಗುತ್ತದೆ.
ಎಲ್ಪಿಜಿ ಸಿಲಿಂಡರ್ ಒಂದು ಅಗತ್ಯ ಸೇವೆಯಾಗಿದ್ದು, ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಹೊಂದುವುದೇ ಅನಗತ್ಯ ವಸೂಲಿ ಮತ್ತು ದುರ್ಬಳಕೆಯನ್ನು ತಡೆಯುವ ಮೊದಲ ಹೆಜ್ಜೆಯಾಗಿದೆ. “ಎಲ್ಲರೂ ಕೊಡುತ್ತಾರೆ, ನಾವೂ ಕೊಡೋಣ” ಎಂಬ ಮನೋಭಾವಕ್ಕಿಂತ “ನಿಯಮ ಏನು ಹೇಳುತ್ತದೆ?” ಎಂಬ ಪ್ರಶ್ನೆಯನ್ನು ಕೇಳುವ ಅಭ್ಯಾಸ ಬೆಳೆಸಿಕೊಳ್ಳುವುದು ಮುಖ್ಯವಲ್ಲವೇ?!