ಭಟ್ಕಳ: ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಬೈಕ್ಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹಾಗೂ ಆಟೋದಲ್ಲಿದ್ದ ಪ್ರಯಾಣಿಕ ಗಾಯಗೊಂಡ ಘಟನೆ ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುಮಟಾ ತಾಲೂಕಿನ ಮಚ್ಚಗೊಂಡ ನಿವಾಸಿ ಅರವಿಂದ ಬೊಮ್ಮಾಯಿ ಹೊಸ್ಕಟ್ಟಾ (70) ಅವರು ಜೂನ್ 12ರಂದು ಮಧ್ಯಾಹ್ನ ತಮ್ಮ ಬೈಕ್ನಲ್ಲಿ ಮುರ್ಡೇಶ್ವರದಿಂದ ಭಟ್ಕಳ ಕಡೆಗೆ ತೆರಳುತ್ತಿದ್ದರು. ಮಾವಿನಕಟ್ಟಾ ಕ್ರಾಸ್ ಸಮೀಪ ಸಣ್ಣಬಾವಿ ಕಡೆಗೆ ತಿರುಗಲು ಬಲಭಾಗದ ಇಂಡಿಕೇಟರ್ ಹಾಕಿ ಬೈಕ್ ತಿರುಗಿಸುತ್ತಿದ್ದ ವೇಳೆ, ಹಿಂದಿನಿಂದ ಅದೇ ದಿಕ್ಕಿನಲ್ಲಿ ಬರುತ್ತಿದ್ದ ಆಟೋ ರಿಕ್ಷಾ ಡಿಕ್ಕಿ ಹೊಡೆದಿದೆ.
ಆಟೋವನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ ಚಾಲಕ ವಸಂತ ನಾಯ್ಕ ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಅರವಿಂದ ಹೊಸ್ಕಟ್ಟಾ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಆಟೋ ರಿಕ್ಷಾ ಕೂಡ ಪಲ್ಟಿಯಾಗಿದ್ದು, ಅದರಲ್ಲಿದ್ದ ಪ್ರಯಾಣಿಕ ಚಂದ್ರಕಾಂತ ಮೊಗೇರ (62) ಅವರಿಗೆ ಕಾಲಿಗೆ ಗಾಯಗಳಾಗಿವೆ.
ಘಟನೆ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.