ಅಂಬಿಕಾನಗರ: ದಟ್ಟ ಅರಣ್ಯ ಪ್ರದೇಶದ ನಡುವೆ ಇರುವ ಅಂಬಿಕಾನಗರದಲ್ಲಿ ಶನಿವಾರ ಬೆಳಗಿನ ಜಾವ ಕರಡಿಯೊಂದು ಮುಖ್ಯ ರಸ್ತೆಯಲ್ಲಿ ಸಂಚರಿಸಿದ ಘಟನೆ ಸ್ಥಳೀಯರು ಹಾಗೂ ಕೆಪಿಸಿ ನೌಕರರಲ್ಲಿ ಆತಂಕ ಮೂಡಿಸಿದೆ.
ಶನಿವಾರ ಬೆಳಗ್ಗೆ ಸುಮಾರು 6 ಗಂಟೆ ಸುಮಾರಿಗೆ ದಟ್ಟ ಕಾಡಿನಿಂದ ಹೊರಬಂದ ಕರಡಿಯೊಂದು ಅಂಬಿಕಾನಗರ ಪವರ್ಹೌಸ್ ಸಮೀಪದ ಮುಖ್ಯ ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಿರುವುದು ವಾಹನ ಸವಾರರ ಗಮನಕ್ಕೆ ಬಂದಿದೆ.
ರಸ್ತೆಯಲ್ಲಿ ಸಾಗುತ್ತಿದ್ದ ಕರಡಿಯ ಎದುರಿಗೆ ವಾಹನ ಬರುತ್ತಿರುವುದನ್ನು ಕಂಡು ಗಾಬರಿಗೊಂಡ ಕರಡಿ ತಕ್ಷಣ ಹಿಂದಿರುಗಿ ಅದೇ ರಸ್ತೆಯಲ್ಲೇ ಓಡಿದೆ. ಈ ಅಪರೂಪದ ದೃಶ್ಯವನ್ನು ವಾಹನದಲ್ಲಿದ್ದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ದಾಂಡೇಲಿ ಸುತ್ತಮುತ್ತ ದಟ್ಟ ಅರಣ್ಯ ಪ್ರದೇಶ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಕರಡಿ ಸೇರಿದಂತೆ ವಿವಿಧ ವನ್ಯಜೀವಿಗಳ ಸಂಚಾರ ಹೆಚ್ಚಾಗಿರುವುದು ಕಂಡುಬರುತ್ತಿದೆ. ಆಹಾರ ಅರಸಿ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಬರುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕರಡಿ ಸೇರಿದಂತೆ ವನ್ಯಜೀವಿಗಳ ಚಲನವಲನದ ಮೇಲೆ ಅರಣ್ಯ ಇಲಾಖೆ ನಿಗಾ ವಹಿಸಿ, ಜನರ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.