Thursday, July 23, 2026
Join WhatsApp Group
HomeAgricultureಬಣ್ಣದಾಟ; ಅಡಕೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿದೆ ಆತಂಕ

ಬಣ್ಣದಾಟ; ಅಡಕೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿದೆ ಆತಂಕ

ಮಲೆನಾಡಿನ ರೈತ ವರ್ಷಪೂರ್ತಿ ಮಳೆ, ಗಾಳಿ, ರೋಗ, ಕೀಟಗಳೊಂದಿಗೆ ಹೋರಾಡಿ ಕೊನೆಗೆ ಅಡಕೆಯನ್ನು ಮಾರುಕಟ್ಟೆಗೆ ತರುತ್ತಾನೆ. ಒಳ್ಳೆಯ ಬೆಲೆ ಸಿಕ್ಕರೆ ಸಾಲ ತೀರಿಸಬಹುದು, ಮಕ್ಕಳ ಶಿಕ್ಷಣದ ವೆಚ್ಚ ನಿಭಾಯಿಸಬಹುದು, ಮುಂದಿನ ಬೆಳೆಗೂ ಬಂಡವಾಳ ಸಿಗಬಹುದು ಎಂಬ ಕನಸುಗಳು ಬೆನ್ನಿಗೇ ಇರುತ್ತವೆ.

ಆದರೆ ಇತ್ತೀಚಿನ ದಿನಗಳಲ್ಲಿ ರೈತನ ಶ್ರಮಕ್ಕಿಂತ ಮಾರುಕಟ್ಟೆಯ ಅನಿಶ್ಚಿತತೆಯೇ ದೊಡ್ಡ ಶತ್ರುವಾಗಿದೆ. ಒಂದು ರಾಜ್ಯದಲ್ಲಿ ಲಾರಿಗಳು ತಡೆಹಿಡಿಯಲ್ಪಡುತ್ತವೆ, ಮತ್ತೊಂದು ಕಡೆ ಅಡಕೆಗೆ ರಾಸಾಯನಿಕ ಬಣ್ಣ ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತವೆ. ಕೆಲವೇ ಮಂದಿ ಮಾಡುವ ಅಕ್ರಮದಿಂದ ಲಕ್ಷಾಂತರ ಪ್ರಾಮಾಣಿಕ ರೈತರು ಬೆಲೆ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಕರ್ನಾಟಕದಿಂದ ತೆರಳುತ್ತಿದ್ದ ಅಡಕೆ ಲಾರಿಗಳನ್ನು ತಡೆಹಿಡಿದ ಘಟನೆ ಅಡಕೆ ಮಾರುಕಟ್ಟೆಗೆ ದೊಡ್ಡ ಆಘಾತ ನೀಡಿತು. ಸಾಗಾಟಕ್ಕೆ ಜಿಎಸ್‌ಟಿ ಬಿಲ್ ಸೇರಿದಂತೆ ಅಗತ್ಯ ದಾಖಲೆಗಳಿದ್ದರೂ, ಪರಿಶೀಲನೆಯ ಹೆಸರಿನಲ್ಲಿ ಸಮಸ್ಯೆ ಸೃಷ್ಟಿಯಾಯಿತು. ಅಡಕೆ ಬೆಳೆಗಾರ ಅಡಕೆಯನ್ನು ಮಾರುಕಟ್ಟೆಗೆ ಒಯ್ಯುವಾಗ ಸ್ವತಃ ರಾಸಾಯನಿಕ ಬಣ್ಣ ಹಾಕುವುದಿಲ್ಲ. ಆತ ಗುಣಮಟ್ಟದ ಅಡಕೆಯನ್ನು ಬೆಳೆದು ಮಾರಾಟ ಮಾಡುತ್ತಾನೆ. ಆದರೆ ಮಾರುಕಟ್ಟೆಯ ಯಾವುದೋ ಹಂತದಲ್ಲಿ ಕೆಲವರು ಅಕ್ರಮ ಲಾಭಕ್ಕಾಗಿ ರಾಸಾಯನಿಕ ಬಣ್ಣ ಬಳಸಿದರೆ, ಅದರ ಕೆಟ್ಟ ಹೆಸರು ಇಡೀ ರಾಜ್ಯದ ಅಡಕೆಗೆ ಅಂಟಿಕೊಳ್ಳುತ್ತದೆ.

ಕೃಷಿ ಮಾರುಕಟ್ಟೆ ಬೆಲೆಗಿಂತ ಹೆಚ್ಚು ವಿಶ್ವಾಸದ ಮೇಲೆ ನಿಂತಿರುತ್ತದೆ. ಒಂದು ಪ್ರದೇಶದ ಉತ್ಪನ್ನದ ಮೇಲೆ ಅನುಮಾನ ಮೂಡಿದರೆ, ಖರೀದಿದಾರರು ಸಹಜವಾಗಿಯೇ ಎಚ್ಚರಿಕೆ ವಹಿಸುತ್ತಾರೆ. ಅದರ ಪರಿಣಾಮ ಬೆಲೆ ಕುಸಿಯುತ್ತದೆ. ಮೊದಲಿಗೆ ನಷ್ಟವಾಗುವುದು ಬೆಳೆದ ರೈತನಿಗೇ. ವ್ಯಾಪಾರಿ ಬೇರೆ ವ್ಯಾಪಾರ ಮಾಡಬಹುದು, ಆದರೆ ರೈತ ಮತ್ತೊಂದು ಬೆಳೆ ಬೆಳೆಸಲು ವರ್ಷಗಳ ಕಾಲ ಕಾಯಬೇಕಾಗುತ್ತದೆ.

ಅಡಕೆ ಕ್ಷೇತ್ರದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗುವ ಭೀತಿ ಕಾಣುತ್ತಿದೆ. ಕೆಲವು ಮಂದಿ ಕಳಪೆ ಅಡಕೆಗೆ ರೆಡ್ ಆಕ್ಸೈಡ್ ಅಥವಾ ಇತರ ರಾಸಾಯನಿಕ ಬಣ್ಣ ಹಚ್ಚಿ ಉತ್ತಮ ಗುಣಮಟ್ಟದಂತೆ ಮಾರಾಟ ಮಾಡಿದರೆ, ಹೊರರಾಜ್ಯದ ಖರೀದಿದಾರರು ಕರ್ನಾಟಕದ ಎಲ್ಲ ಅಡಕೆಯನ್ನೂ ಅನುಮಾನದಿಂದ ನೋಡುವಂತಾಗಿದೆ.

ನೈಸರ್ಗಿಕವಾಗಿ ಸಂಸ್ಕರಿಸಿದ ಅಡಕೆ ಮತ್ತು ಕೃತಕ ಬಣ್ಣ ಹಚ್ಚಿದ ಅಡಕೆ ಎರಡೂ ಒಂದೇ ರೀತಿಯಾಗಿ ಕಾಣಲು ಆರಂಭಿಸಿದರೆ, ಗುಣಮಟ್ಟದ ಮೌಲ್ಯವೇ ಕಳೆದುಹೋಗುತ್ತದೆ. ಹೆಚ್ಚು ಶ್ರಮಪಟ್ಟು ಉತ್ತಮ ಗುಣಮಟ್ಟದ ಅಡಕೆ ತಯಾರಿಸಿದ ರೈತನಿಗೂ, ಕಳಪೆ ಅಡಕೆಗೆ ಬಣ್ಣ ಹಚ್ಚಿ ಮಾರಾಟ ಮಾಡಿದವನಿಗೂ ಒಂದೇ ಬೆಲೆ ಸಿಗುವ ಪರಿಸ್ಥಿತಿ ಬಂದರೆ, ಪ್ರಾಮಾಣಿಕ ರೈತನಿಗೆ ಅದು ದೊಡ್ಡ ಹೊಡೆತ.

ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ಸಾವಿರಾರು ಕುಟುಂಬಗಳು ಅಡಕೆಯನ್ನೇ ಅವಲಂಬಿಸಿವೆ. ಸಹಕಾರಿ ಸಂಸ್ಥೆಗಳು, ಎಪಿಎಂಸಿ, ಸಂಸ್ಕರಣಾ ಘಟಕಗಳು, ಸಾರಿಗೆ ವಲಯ ಇವೆಲ್ಲವೂ ಈ ಬೆಳೆಯ ಸುತ್ತ ಬದುಕು ಕಟ್ಟಿಕೊಂಡಿವೆ.

ಅಂತಹ ಸಂದರ್ಭದಲ್ಲಿ ಕೆಲವರು ಅಕ್ರಮ ಲಾಭಕ್ಕಾಗಿ ಹಿಡಿಯುವ ಅಡ್ಡದಾರಿಗಳಿಂದ ಇಡೀ ಉದ್ಯಮಕ್ಕೆ ಕೆಟ್ಟ ಹೆಸರು ಬಂದರೆ ಅದರ ಹೊರೆ ಲಕ್ಷಾಂತರ ರೈತರ ಮೇಲೆ ಬೀಳುತ್ತದೆ.

ಸಮಸ್ಯೆಗೆ ಕೇವಲ ಖಂಡನೆ ಸಾಕಾಗುವುದಿಲ್ಲ. ವ್ಯವಸ್ಥೆಯಲ್ಲೇ ಬದಲಾವಣೆ ಅಗತ್ಯವಿದೆ. ಅಡಕೆ ಸಂಸ್ಕರಣಾ ಘಟಕಗಳಲ್ಲಿ ನಿಯಮಿತ ಗುಣಮಟ್ಟ ಪರೀಕ್ಷೆ ಕಡ್ಡಾಯವಾಗಬೇಕು. ನೈಸರ್ಗಿಕವಾಗಿ ಸಂಸ್ಕರಿಸಿದ ಅಡಕೆಗೆ ಪ್ರತ್ಯೇಕ ಪ್ರಮಾಣೀಕರಣ (Certification) ನೀಡಿದರೆ ಖರೀದಿದಾರರಲ್ಲಿ ವಿಶ್ವಾಸ ಹೆಚ್ಚುತ್ತದೆ. ಸಹಕಾರಿ ಸಂಸ್ಥೆಗಳು ರೈತರಿಗೆ ರಾಸಾಯನಿಕ ಮುಕ್ತ ಸಂಸ್ಕರಣೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಸರ್ಕಾರವು ಹೊರರಾಜ್ಯಗಳೊಂದಿಗೆ ಸಮನ್ವಯ ಸಾಧಿಸಿ ದಾಖಲೆಗಳಿರುವ ಸರಕು ಸಾಗಾಟಕ್ಕೆ ಅನಗತ್ಯ ಅಡ್ಡಿ ಉಂಟಾಗದಂತೆ ನೋಡಿಕೊಳ್ಳಬೇಕಿದೆ.

ಅಡಕೆ ಮಲೆನಾಡಿನ ಆರ್ಥಿಕ ನಾಡಿ. ಒಬ್ಬ ರೈತನ ಮನೆಯ ಆದಾಯದಿಂದ ಹಿಡಿದು ಸಾವಿರಾರು ಕುಟುಂಬಗಳ ಬದುಕಿನವರೆಗೆ ಈ ಬೆಳೆಯೊಂದಿಗೆ ಬೆಸೆದುಕೊಂಡಿದೆ. ಕೆಲವರ ಅಕ್ರಮದಿಂದ ಇಡೀ ಅಡಕೆ ಉದ್ಯಮದ ವಿಶ್ವಾಸ ಕುಸಿದರೆ ಅದರ ಬೆಲೆ ತೆರಬೇಕಾಗುವುದು ಪ್ರಾಮಾಣಿಕ ರೈತನೇ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share